Site icon PowerTV

ಲಾಲ್ ಸಿಂಗ್ ಚಡ್ಡಾ’ದಿಂದ ಆಮಿರ್ ಖಾನ್​ಗೆ 100 ಕೋಟಿ ರೂಪಾಯಿ ನಷ್ಟ

ನಟ ಆಮಿರ್ ಖಾನ್ ಅವರು ಸಾಲು ಸಾಲು ಸೋಲು ಅನುಭವಿಸುತ್ತಿದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಿಂದ ಆಮಿರ್ ಖಾನ್​ಗೆ ದೊಡ್ಡ ಹಿನ್ನಡೆ ಆಗಿದೆ.

ಕಥೆಯ ಆಯ್ಕೆ, ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸ, ಸಿನಿಮಾ ಪ್ರಚಾರ ಸೇರಿ ಎಲ್ಲ ವಿಚಾರಗಳಲ್ಲೂ ಆಮಿರ್ ಖಾನ್ ಅವರೇ ಮುಂದಾಳತ್ವ ವಹಿಸಿದ್ದರಿಂದ ಈಗ ಸೋಲಿನ ಸಂಪೂರ್ಣ ಹೊಣೆಯನ್ನು ಅವರೇ ವಹಿಸಿಕೊಳ್ಳಬೇಕಿದೆ. ಇದರಿಂದ ಅವರಿಗೆ ಸುಮಾರು 100 ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ ಎಂದು ವರದಿ ಆಗಿದೆ. ನಾಲ್ಕು ವರ್ಷಗಳ ಕಾಲ ಆಮಿರ್ ಖಾನ್ ಪಟ್ಟ ಶ್ರಮ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಹಾಲಿವುಡ್​ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ‘ಲಾಲ್ ಸಿಂಗ್ ಚಡ್ಡಾ’. ಆಮಿರ್​ ಖಾನ್ ಈ ಚಿತ್ರದ ಬಗ್ಗೆ ಸಾಕಷ್ಟು ಒಲವು ತೋರಿಸಿದ್ದರು.

ಸಿನಿಮಾಗಾಗಿ ಸಾಕಷ್ಟು ಸಮಯ ಹಾಗೂ ಶ್ರಮ ಹಾಕಿದ್ದರು. ಆದರೆ ಇದು ವ್ಯರ್ಥವಾಗಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ 60 ಕೋಟಿ ರೂಪಾಯಿಗೂ ಕಡಿಮೆ ಬಿಸ್ನೆಸ್ ಮಾಡಿದೆ. ನಾಲ್ಕು ವರ್ಷಗಳಿಂದ ಆಮಿರ್ ಖಾನ್ ಈ ಚಿತ್ರಕ್ಕೆ ಒಂದೇ ಒಂದು ರೂಪಾಯಿ ಸ್ವೀಕರಿಸಿಲ್ಲ. ಈ ಚಿತ್ರಕ್ಕಾಗಿ 100 ಕೋಟಿ ರೂಪಾಯಿ ಸಂಭಾವನೆ ಪಡೆಯಲು ಆಮಿರ್ ನಿರ್ಧರಿಸಿದ್ದರು. ಇದನ್ನು ಹೂಡಿಕೆ ರೂಪದಲ್ಲಿ ಪರಿಗಣಿಸಲು ಅವರು ನಿರ್ಮಾಣ ಸಂಸ್ಥೆಗೆ ಸೂಚಿಸಿದ್ದರು. ಸಿನಿಮಾ ಗೆದ್ದು ಯಶಸ್ಸು ಪಡೆದ ನಂತರದಲ್ಲಿ ಅವರು ಲಾಭದ ಜತೆ ಹೂಡಿಕೆ ಮಾಡಿದ ಹಣವನ್ನೂ ಪಡೆಯುವ ಆಲೋಚನೆಯಲ್ಲಿದ್ದರು. ಆದರೆ, ಅದು ತಲೆಕೆಳಗಾಗಿದೆ. ಸಿನಿಮಾ ಹೀನಾಯವಾಗಿ ಸೋತಿದೆ.

Exit mobile version