Site icon PowerTV

ಚುನಾವಣೆ ಪ್ರಕ್ರಿಯೆ ಶುರು ಮಾಡಲು ಸೂಚನೆ

ಬೆಂಗಳೂರು : ಬಿಬಿಎಂಪಿ ಚುನಾವಣೆಗೆ ಕೊನೆಗೂ ಕಾಲ‌ ಕೂಡಿಬರುತ್ತಿದೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಆಗುತ್ತೋ ಇಲ್ಲವೊ ಎಂಬ ಗೊಂದಲ ಮಧ್ಯೆ ರಾಜ್ಯ ಚುನಾವಣಾ ಆಯೋಗ ಅಧಿಕೃತವಾಗಿ ಮಹತ್ವದ ಸಭೆ ನಡೆಸಿತು. ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ರಾಜ್ಯ ಚುನಾವಣಾ ಆಯುಕ್ತ ಬಸವರಾಜ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಜಿಲ್ಲಾಧಿಕಾರಿ ಅನಿತಾ ಬಿಬಿಎಂಪಿ ವಿಶೇಷ ಆಯುಕ್ತರಾದ ರಂಗಪ್ಪ, ರಾಮ್ ಪ್ರಸಾದ್, ಹರೀಶ್ ಸೇರಿ ಮತ್ತಿತರು ಭಾಗಿಯಾಗಿದ್ದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ರಂಗ ಸಜ್ಜಾಗಿದ್ದು, ಆಗಸ್ಟ್ 25 ರಂದು ಮತದಾರರ ಪಟ್ಟಿಯ ಕರಡು ಪ್ರಕಟ ಮಾಡಲು ಸೂಚನೆ ನೀಡಲಾಯಿತು.

ಮತದಾರರ ಪಟ್ಟಿಯ ಕರಡು ಪ್ರಕಟಗೊಂಡ ಕೂಡಲೇ ಪಾಲಿಕೆಯ ಜಾಲತಾಣದಲ್ಲಿ ಮಾಹಿತಿ ಹಾಕಬೇಕು. ಇದರ ಜೊತೆಗೆ ನೋಂದಾಯಿತ ರಾಜಕೀಯ ಪಕ್ಷಗಳ ಕಚೇರಿಗೆ ಹಾಗೂ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳಿಗೆ ಮತದಾರರ ಪಟ್ಟಿಯ ಕರಡು ಪ್ರತಿಯನ್ನು ನೀಡುವಂತೆ ಪಾಲಿಕೆಯ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು. ವಾರ್ಡ್ ಮರು ವಿಂಗಡಣೆಯಾಗಿರುವ ಹಿನ್ನೆಲೆಯಲ್ಲಿ ಮೊದಲು ಮತಗಟ್ಟೆಗಳ ಪರಿಶೀಲನೆ ಆಗಬೇಕಿದೆ. ವಾರ್ಡ್‌ಗಳಿಗೆ ಉಸ್ತುವಾರಿ ಅಧಿಕಾರಿಗಳನ್ನು ಗುರುತಿಸಿ ನೇಮಕ ಮಾಡಲು ಪಟ್ಟಿ ಸಿದ್ಧಗೊಳಿಸಬೇಕಿದೆ ಎಂದು ರಾಜ್ಯ ಚುನಾವಣಾ ಆಯೋಗ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪ್ರತಿ ಬಾರಿ ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಅತ್ಯಂತ ಕಡಿಮೆ ಇರುತ್ತದೆ. ಇದನ್ನು ಹೆಚ್ಚಿಸಲು ವ್ಯಾಪಕ ಪ್ರಚಾರ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ. ಆದರೆ, ಈ ನಿಟ್ಟಿನಲ್ಲಿ ವೆಚ್ಚ ಮಾಡುವಲ್ಲಿ ಮಿತವ್ಯಯ ಸಾಧಿಸುವ ಬಗ್ಗೆ ಚರ್ಚೆಯಾಯಿತು. ಇನ್ನು ವೋಟರ್ ಐಡಿ, ವಾರ್ಡ್ ಬೌಂಡರಿ, ಚುನಾವಣೆಗೆ ಅಗತ್ಯವಾದ ಸಿಬ್ಬಂದಿ ನೇಮಕಕ್ಕೆ ತಯಾರಿಯಾಗಬೇಕು. ಇವಿಎಂ ಸೇರಿ ಚುನಾವಣೆಗೆ ಬೇಕಾದ ಎಲ್ಲಾ ಸಿದ್ಧತೆಗೆ ಚುನಾವಣಾ ಆಯೋಗ ಸೂಚನೆ‌ ನೀಡಿದೆ.

ರಾಜ್ಯ ಚುನಾವಣಾ ಆಯೋಗವೇನೋ ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ಶುರು ಮಾಡಿದೆ. ಎಲ್ಲಾ ಅಂದುಕೊಂಡಂತೆ ಆದರೆ ಅಕ್ಟೋಬರ್ ಮೊದಲ ವಾರದಲ್ಲಿ ನೋಟಿಫಿಕೇಷನ್ ಹೊರಡಿಸಿ, 21 ದಿನಗಳಲ್ಲಿ ಚುನಾವಣಾ ಪ್ರಕ್ರಿಯೆ ಸಂಪೂರ್ಣಗೊಳ್ಳಲಿದೆ. ಆದರೆ, ಮೀಸಲಾತಿ ಪ್ರಶ್ನಿಸಿ ಹಲವರು ಕೋರ್ಟ್‌ ಮೊರೆ ಹೋಗಿದ್ದಾರೆ. ಈ ಸಂಬಂಧ ಹೈಕೋರ್ಟ್, ಸುಪ್ರಿಂಕೋರ್ಟ್ ಏನು ಸೂಚನೆ ಕೊಡುತ್ತದೋ ಅನ್ನೋದರ ಮೇಲೆ ಬಿಬಿಎಂಪಿ ಚುನಾವಣೆ ಯಾವಾಗ ನಡೆಯಲಿದೆ ಅನ್ನೋದು ನಿರ್ಧಾರವಾಗಲಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

Exit mobile version