ಬೆಂಗಳೂರು : ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಪಾದಯಾತ್ರೆ ಆಯೋಜನೆ ನೆಪದಲ್ಲಿ ಬಿಬಿಎಂಪಿ ಚುನಾವಣೆಗೆ ಡಿಕೆ ಬ್ರದರ್ ಸಜ್ಜುಗೊಳಿಸುತ್ತಿದ್ದಾರೆ.
ನಗರದ ಕ್ಷೇತ್ರಾವಾರು ಪ್ರವಾಸ ನಡೆಸುತ್ತಿರುವ ಡಿಕೆ ಸಹೋದರರು. ಪಕ್ಷದ ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ ಸಹೋದರರಿಂದ ಸರಣಿ ಸಭೆ ನಡೆಸಲಾಗುತ್ತಿದೆ. ನಿನ್ನೆ ಬೊಮ್ಮನಹಳ್ಳಿ, ಬಸವನಗುಡಿ, ಪದ್ಮನಾಭನಗರ, ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಸಭೆ ನಡೆಸಿರುವ ಡಿಕೆಶಿ, ಇಂದೂ ಕೂಡ ಯಲಹಂಕ, ರಾಜಾಜಿನಗರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್ನಲ್ಲಿ ಸರಣಿ ಸಭೆ ನಡೆಸಲಿದ್ದಾರೆ.
ರಾಮನಗರ ಜಿಲ್ಲೆಗೆ ಹೊಂದಿಕೊಂಡಿರುವ ಬೆಂಗಳೂರಿನಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ಡಿಕೆ ಬ್ರದರ್ಸ್ ಪಣ ತೊಟ್ಟಿದ್ದಾರೆ. ಸ್ವಾತಂತ್ರ್ಯ ದಿನದಂದು ಹಮ್ಮಿಕೊಂಡಿರುವ ಅಮೃತ ಮಹೋತ್ಸವಕ್ಕೆ ಹೈಕಮಾಂಡ್ ನಾಯಕರನ್ನ ಕರೆಸಲು ಪ್ರಯತ್ನಿಸುತ್ತಿದ್ದು, ತಾವೇ ಮುಂದೆ ನಿಂತು ಹೈಕಮಾಂಡ್ ಕರೆಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.
ಇನ್ನು, ರಾಹುಲ್ ಗಾಂಧಿ ಬೆನ್ನಲ್ಲೆ ಪ್ರಿಯಾಂಕಾ ಗಾಂಧಿ ಕರೆಸಲು ಪ್ರಯತ್ನಿಸುತ್ತಿರುವ ಡಿಕೆಶಿ, ಈಗಾಗಲೇ ಪ್ರಿಯಾಂಕಾ ಗಾಂಧಿಗೆ ಆಹ್ವಾನ ನೀಡಿದ್ದಾರೆ. ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿಯನ್ನ ಕರೆಸುವ ಮೂಲಕ ಸಂದೇಶ ರವಾನಿಸುವ ಲೆಕ್ಕಾಚಾರದಲ್ಲಿದ್ದು, ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದು ಪಕ್ಷದಲ್ಲಿ ತಮ್ಮ ಸಾಮರ್ಥ್ಯ ತೋರಿಸುವ ತಂತ್ರ ಹೂಡುತ್ತಿದ್ದಾರೆ. ಹಾಗಾಗಿ ಬಿಬಿಎಂಪಿ ಚುನಾವಣೆ ಘೋಷಣೆಗೂ ಮೊದಲೇ ಡಿಕೆ ಬ್ರದರ್ಸ್ ಅಖಾಡಕ್ಕೆ ಇಳಿದಿದ್ದಾರೆ.


