Site icon PowerTV

ಅವೈಜ್ಞಾನಿಕ UGD ಸೇವಾ ಬಾವಿಯಿಂದ ರೈತರಿಗೆ ತೊಂದರೆ..!

ತುಮಕೂರು : ನಿರ್ವಹಣೆ ಇಲ್ಲದೇ ನಿಂತಿರೋ ಯುಜಿಡಿ ಸೇವಾ ಬಾವಿ. ತುಂಬಿ ಹರಿಯುತ್ತಿರೋ ಯುಜಿಡಿ ನೀರು. ಸತ್ತ ಬಿದ್ದ ಮೀನುಗಳು. ಜಮೀನಿಗೆ ನೀರು ತುಂಬಿ ಹಾಳಾಗ್ತೀದೆ ಅಂತಾ ಸರ್ಕಾರಕ್ಕೆ ಹಿಡಿಶಾಪ ಹಾಕ್ತಿರೋ ರೈತ ಮಹಿಳೆ. ಇಂತಹ ದೃಶ್ಯಗಳು ಕಂಡು ಬಂದಿದ್ದು ತುಮಕೂರು ಹೊರವಲಯದಲ್ಲಿರೋ ಗಂಗಸಂದ್ರ ಗ್ರಾಮದಲ್ಲಿ.

ಕೇಳಿಸ್ಕೋಂಡ್ರಲ್ಲಾ ಪಾಪ ಅಜ್ಜಿಯ ನೋವನ್ನ. ಕಷ್ಟ ಪಟ್ಟು ಬೆಳೆಸಿದ ಗಿಡಗಳೆಲ್ಲಾ ನೀರು ಪಾಲಾಗಿವೆ ಎಂಬ ಅಜ್ಜಿ ನೋವಾದ್ರೆ, ಪ್ರತಿ ಭಾರಿ ಮಳೆ ಬಂದಾಗಲೂ ಈ ಯುಜಿಡಿ ಸೇವಾ ಬಾವಿ ತುಂಬಿ ಹರಿದು ಈ ಭಾಗದ ರೈತರಿಗೆ ಆಗುತ್ತಿರುವ ನಷ್ಟ ಅಷ್ಟಿಷ್ಟಲ್ಲ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಗಂಗಸಂದ್ರದ ಸೇವಾ ಬಾವಿ ಕಾಮಗಾರಿ ಮುಗಿಸಿ ವರ್ಷ ಕಳೆದಿದೆ. ಇದು ಅವೈಜ್ಞಾನಿಕ ಕಾಮಗಾರಿ ಎಂದು ಪಾಲಿಕೆ ಅಧಿಕಾರಿಗಳು ಅವರ ಆಡಳಿತಕ್ಕೆ ಪಡೆಯಲು ಮುಂದಾಗಿಲ್ಲ. ಆಗಾಗಿ ಇನ್ನೂ ಸಹ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿಯೇ ಇರುವ ಈ ಸೇವಾ ಬಾವಿಯಲ್ಲಿನ ಮೋಟರ್ ಪಂಪ್​ಗಳು ಕೆಟ್ಟು ನಿಂತಿವೆ. ಮೂರು ಮೋಟರ್ ಪಂಪ್​ಗಳು ನಿರ್ವಹಣೆ ಇಲ್ಲದೇ ಇರುವುದು ನಿಜಕ್ಕೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬೇಜಾವಾಬ್ದಾರಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.

ಸೇವಾ ಬಾವಿ ನಿರ್ವಹಣೆ ಇಲ್ಲದೇ ಇರೋದರಿಂದ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆದ ಬೆಳೆಗಳು ನಾಶವಾಗುತ್ತಿದೆ. ಅಲ್ಲದೇ ಪದ್ಮಶ್ರೀ ಪುರಸ್ಕೃತ ಸೂಲಗಿತ್ತಿ ನರಸಮ್ಮನ ಸಮಾಧಿ ಸಹ ಈ ಸೇವಾ ಬಾವಿ ಪಕ್ಕದಲ್ಲೇ ಇರೋದರಿಂದ ಸಮಾಧಿ ಸಂಪೂರ್ಣ ಯುಜಿಡಿ ನೀರಿನಿಂದ ತುಂಬಿಕೊಂಡಿದೆ.

ನಿಮ್ಮ ಪವರ್ ಟಿವಿ ವರದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಸ್ಥಳಕ್ಕೆ ಆಗಮಿಸಿ ಅಲ್ಲಿನ ಜನರ ಕಷ್ಟ ಆಲಿಸಿದರು. ಜೊತೆಗೆ ತಾತ್ಕಾಲಿಕ ಚರಂಡಿ ನಿರ್ಮಾಣ ಹಾಗೂ ನೂತನ ಪಂಪಿಂಗ್ ಮೋಟರ್ ಅಳವಡಿಸಲು ಸೂಚಿಸಿದ್ರು.

ಒಟ್ಟಾರೆ ನಿಮ್ಮ ಪವರ್ ಟಿವಿ ಯಾವುದೇ ಸುದ್ದಿಯಾದ್ರು ಅದರ ತಾರ್ಕಿಕ ಅಂತ್ಯದವರೆಗೆ ಫಾಲೋ ಆಪ್ ಮಾಡದೇ ಬಿಡುವುದಿಲ್ಲ. ಇನ್ನಾದರೂ ಅಧಿಕಾರಿಗಳು ಯುಜಿಡಿ ಸೇವಾ ಬಾವಿಯ ನಿರ್ವಹಣೆಯನ್ನ ಸರಿಯಾಗಿ ನಿಬಾಯಿಸಿ, ರೈತರ ಸಮಸ್ಯೆ ಅಂತ್ಯ ಹಾಡಲಿ ಎಂಬುದು ನಮ್ಮ ಆಶಯ.

ಹೇಮಂತ್ ಕುಮಾರ್. ಜೆ.ಎಸ್ ಪವರ್ ಟಿವಿ ತುಮಕೂರು

Exit mobile version