Site icon PowerTV

ಹಾಸನದಲ್ಲಿ ಬಿಸಿಯೂಟ ಸೇವಿಸಿದ ಒಟ್ಟು 56 ವಿದ್ಯಾರ್ಥಿಗಳು ಅಸ್ವಸ್ಥ

ಹಾಸನ : ಮಕ್ಕಳ ಆರೋಗ್ಯದ ಜೊತೆ ಶಿಕ್ಷಣ ಇಲಾಖೆ ಚೆಲ್ಲಾಟ ಆಡಿದ್ದು, ನಿನ್ನೆ ಒಂದೇ ದಿನ 3 ಜಿಲ್ಲೆಗಳಲ್ಲಿ ಬಿಸಿಯೂಟ ತಿಂದ ಮಕ್ಕಳು ಆಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ ಘಟನೆ ಚಿತ್ರದುರ್ಗ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ನಡೆದಿದೆ.

ಪ್ರತಿದಿನ ರಾಜ್ಯದ ಒಂದಿಲೊಂದು ಶಾಲೆಯ ಮಕ್ಕಳು ಅಸ್ವಸ್ಥಗೊಂಡಿದ್ದು, ಚಿತ್ರದುರ್ಗದಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಆದರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳದ ರಾಜ್ಯ ಸರ್ಕಾರ, ಶಿಕ್ಷಣ ಇಲಾಖೆ ಸಮರ್ಪಕ ದವಸ ಧಾನ್ಯಗಳು ಶಾಲೆಗಳಿಗೆ ಪೂರೈಕೆಯಾಗುತ್ತಿಲ್ಲವಾ? ಅಡುಗೆ ಮಾಡುವ ವಿಧಾನದಲ್ಲಿ ವ್ಯತ್ಯಾಸವಾಗುತ್ತಿದೆಯಾ? ಅಡುಗೆಯನ್ನು ಶುಚಿಯಾದ ಪಾತ್ರೆಗಳಲ್ಲಿಯೇ ಮಾಡಬೇಕು. ಅಡುಗೆಗೆ ತಾಜಾ ತರಕಾರಿ, ಸೊಪ್ಪು, ಬೇಳೆಕಾಳುಗಳನ್ನು ಬಳಸಬೇಕು. ಉತ್ತಮ ಗುಣಮಟ್ಟದ ಕುಡಿಯುವ ನೀರನ್ನು ಉಪಯೋಗಿಸಬೇಕು. ಅಡುಗೆ ನಂತರ ಮುಖ್ಯ ಶಿಕ್ಷಕರು ಅಡುಗೆಯ ರುಚಿ ನೋಡಬೇಕು. ಆಹಾರ ಪರಿಶೀಲಿಸಿದ ನಂತರವೇ ಮಕ್ಕಳಿಗೆ ಊಟ ಬಡಿಸಬೇಕು. ಹಾಗಾದರೆ ಶಿಕ್ಷಕರು ಬಿಸಿಯೂಟವನ್ನು ಪರಿಶೀಲಿಸುತ್ತಿಲ್ಲವೇ..? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ಇನ್ನು, ಶಿಕ್ಷಕರ ಉಡಾಫೆಯಿಂದ ಮಕ್ಕಳು ಫುಡ್ ಪಾಯಿಸನ್​ಗೆ ತುತ್ತಾಗುತ್ತಿದ್ದಾರಾ? ಶಿಕ್ಷಣ ಸಚಿವರೇ ದಯವಿಟ್ಟು ಬಿಸಿಯೂಟದ ಕಡೆ ಗಮನ ಹರಿಸಿ. ಮಕ್ಕಳ ಆರೋಗ್ಯದ ಬಗ್ಗೆ ಇಂಥಾ ಉದಾಸೀನ ಸಲ್ಲದು. ಇದು ಹೀಗೆ ಮುಂದುವರಿದರೆ ವಿದ್ಯಾರ್ಥಿಗಳ ಆರೋಗ್ಯದ ಗತಿ ಏನು? ಶಿಕ್ಷಣ ಇಲಾಖೆ, ಶಿಕ್ಷಣ ಸಚಿವರೇಕೆ ಇದರ ಬಗ್ಗೆ ಜಾಗೃತಿ ವಹಿಸುತ್ತಿಲ್ಲ? ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆಗಾರರು? ಶಿಕ್ಷಣ ಸಚಿವರೇ ಮಕ್ಕಳ ಆರೋಗ್ಯದ ಕಡೆ ಗಮನ ಕೊಡಿ. ನಮ್ಮ ದೇಶದ ಭವಿಷ್ಯ ಪ್ರಜೆಗಳ ಯೋಗ ಕ್ಷೇಮ ನಮ್ಮೆಲರ ಹೊಣೆ.

ಅದಲ್ಲದೇ, ಮೊದಲೇ ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಪೋಷಕರು, ನಿಧಾನಗತಿಯಲ್ಲಿ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೇ ಮುಚ್ಚುತ್ತಿವೆ. ಹೀಗೆ ಮಕ್ಕಳು ಅಸ್ವಸ್ಥಗೊಂಡರೆ ಪೋಷಕರು ಆತಂಕಕ್ಕೆ ಒಳಗಾಗುತ್ತಾರೆ. ಅಸಮರ್ಪಕ ವ್ಯವಸ್ಥೆ ಸರಿಪಡಿಸದೇ ಹೋದರೆ ಸರ್ಕಾರಿ ಶಾಲೆಗಳಿಗೆ ಉಳಿಗಾಲವಿಲ್ಲ.

Exit mobile version