Site icon PowerTV

ಪ್ರವೀಣ್​​ ಹತ್ಯೆ ಪ್ರಕರಣ: ಸಿಎಂಗೆ ತನಿಖೆ ಮಾಹಿತಿ ಕೊಟ್ಟ ಡಿಜಿಪಿ

ದಕ್ಷಿಣ ಕನ್ನಡ: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆಗೆ ಐದು ಪ್ರತ್ಯೇಕ ಪೊಲೀಸ್​ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಪೊಲೀಸರು ಹಲವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ . ಕೊಲೆ ಸಂಬಂಧ ಸ್ಥಳೀಯರೊಬ್ಬರು ನೀಡಿದ ದೂರಿನಂತೆ ಮೂರು ಜನ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಕೋಳಿ ಅಂಗಡಿಯಲ್ಲಿ ವ್ಯಾಪಾರ ಮುಗಿಸಿ ಬಾಗಿಲು ಹಾಕಿ ಹೊರಡಲು ಸಿದ್ಧತೆಯಲ್ಲಿದ್ದ ಪ್ರವೀಣ್​ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು. ಬಳಿಕ ಮೂವರು ಅಪರಿಚಿತರು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬೈಕ್​ನಲ್ಲಿ ಪುತ್ತೂರು ಕಡೆಗೆ ಪರಾರಿಯಾಗಿದ್ದಾರೆ. ಈ ಘಟನೆಯ ನಂತರ ಸುಳ್ಯ, ಕಡಬ ಹಾಗು ಪುತ್ತೂರು ತಾಲೂಕುಗಳಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಸೆಕ್ಷನ್‌ 144 ಜಾರಿ ಮಾಡಲಾಗಿದೆ.

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿ, ಪ್ರವೀಣ್ ಹತ್ಯೆಯು ವ್ಯವಸ್ಥಿತ ಸಂಚು. ಕೇರಳಕ್ಕೆ ಹೋಗಿಯೂ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು. ಇನ್ನೊಂದೆಡೆ, ಕೊಲೆ ಆರೋಪಿಗಳು ಕೇರಳ ನೋಂದಣಿ ಸಂಖ್ಯೆಯ ಬೈಕ್​ನಲ್ಲಿ ಆಗಮಿಸಿದ್ದಾರೆಂಬ ಗುಮಾನಿ ಇರುವುದರಿಂದ ತನಿಖೆಯನ್ನು ಕೇರಳ ಕಡೆಗೂ ಕೇಂದ್ರೀಕರಿಸಲಾಗಿದೆ ಎನ್ನಲಾಗ್ತಿದೆ.

ಸಿಎಂ ಗೃಹ ಕಚೇರಿ ಕೃಷ್ಣಾಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಭೇಟಿ ನೀಡಿ 20 ನಿಮಿಷಕ್ಕೂ ಹೆಚ್ಚು ಕಾಲ ಸಿಎಂ ಜೊತೆ ಮಾತುಕತೆ ನಡೆಸಿದರು. ಪ್ರವೀಣ್ ಹತ್ಯೆ ಸಂಬಂಧ ಆಗುತ್ತಿರುವ ಬೆಳವಣಿಗೆ ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿದರು. ಮಂಗಳೂರು ಎಸ್ಪಿ ನೀಡಿರುವ ಮಾಹಿತಿ, ಕಾಸರಗೋಡು ಪೊಲೀಸರ ಸಹಕಾರ ಪಡೆದುಕೊಂಡಿರುವುದು ಸೇರಿದಂತೆ ಕರ್ನಾಟಕ, ಕೇರಳ ಎರಡು ರಾಜ್ಯದ ಗಡಿ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಕುರಿತು ಎಲ್ಲ ವಿವರವನ್ನು ಸಿಎಂಗೆ ವಿವರಿಸಿದರು.

Exit mobile version