Site icon PowerTV

ದೇವೇಗೌಡರ ಕುಟುಂಬವನ್ನೇಕೆ ಪ್ರಶ್ನಿಸುವುದಿಲ್ಲ: ಹೆಚ್.ವಿಶ್ವನಾಥ್

ಮೈಸೂರು: ಬಿ.ಎಸ್. ಯಡಿಯೂರಪ್ಪ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಪುತ್ರ ಬಿ.ವೈ.ವಿಜಯೇಂದ್ರಗೆ ಟಿಕೆಟ್ ಕೇಳಿರುವುದನ್ನು ಸಮರ್ಥಿಸಿಕೊಂಡ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ‘ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮನೆ ಮಂದಿಯೆಲ್ಲಾ ರಾಜಕಾರಣದಲ್ಲಿದ್ದಾರೆ. ಅದನ್ನೇಕೆ ಯಾರೂ ಪ್ರಶ್ನಿಸುವುದಿಲ್ಲ’ ಎಂದು ಕೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸತತ 8 ಬಾರಿ ಪ್ರತಿ‌ನಿಧಿಸಿರುವ ಕ್ಷೇತ್ರದಲ್ಲಿ ಪುತ್ರನಿಗೆ ಟಿಕೆಟ್ ಕೋರಿದ್ದರಲ್ಲಿ ತಪ್ಪೇನಿಲ್ಲ’ ಎಂದು ಹೇಳಿದರು.

‘ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ನೆಲೆಯೂರಲು ಅವರ ಕೊಡುಗೆ ಅಪಾರವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಪಕ್ಷಕ್ಕೆ ಅವರ ಮಾರ್ಗದರ್ಶನ ಅವಶ್ಯವಾಗಿದ್ದು, ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಬೇಕು’ ಎಂದರು.

‘ಬರೇ ಸಿದ್ದರಾಮಯ್ಯ ಪುಂಗಿ ಊದಿದರೆ ಕಾಂಗ್ರೆಸ್ ಪುಂಗಿ ಊದುವವರು ಯಾರು?’ ಎಂದು ಕಟುವಾಗಿ ಪ್ರಶ್ನಿಸಿದ ವಿಶ್ವನಾಥ್, ‘ಕಾಂಗ್ರೆಸ್ಸಿನ ಉತ್ಸವ ನಡೆಯಬೇಕಿತ್ತು. ಇಂದಿರಾ ಗಾಂಧಿ, ಡಿ.ದೇವರಾಜ ಅರಸು ಸ್ಮರಿಸಿ ನಾಡು–ದೇಶಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಮಾತನಾಡಬೇಕಿತ್ತು’ ಎಂದರು.

‘ಕಲಾಮಂದಿರದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಸ್ವತಃ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ಹೆಸರೇಳಲಿಲ್ಲ. ಎಲ್ಲವನ್ನೂ ಮಾಡಿದ್ದು ತಾನೇ ಎಂದು ಬಿಂಬಿಸಿಕೊಂಡಿದ್ದಾರೆ’ ಎಂದು ಟೀಕಿಸಿದರು.

Exit mobile version