Site icon PowerTV

ಆಷಾಢ ಮಾಸದ ಕೊನೆ ವಾರ ಬಾಲಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಪೂಜೆ

ಶಿವಮೊಗ್ಗ: ಈ ಆಷಾಢ ಮಾಸದಲ್ಲಿ, ಯಾವುದೇ ಶುಭ ಸಮಾರಂಭಗಳಾಗಲೀ, ಯಾವುದೇ ಜಾತ್ರೆಗಳಾಗಲೀ ನಡೆಯೋದಿಲ್ಲ. ಹಾಗೇನಾದರೂ ಮಾಡಿದರೇ, ಅದು ಅಶುಭ ಉಂಟಾಗುತ್ತದೆ ಎಂಬುದು ನಂಬಿಕೆ. ಆದರೆ, ಈ ಜಾತ್ರೆ ಮಾತ್ರ ಆಷಾಢ ಮಾಸದಲ್ಲೇ ಬರುವುದು ವಾಡಿಕೆ. ಅದರಲ್ಲೂ ಈ ಜಾತ್ರೆಯಲ್ಲಿ ಕಾವಡಿ ಹೊತ್ತ ಭಕ್ತರೇ ಪ್ರಮುಖ ಆಕರ್ಷಣೆ ಕೂಡ.

ಆಡಿಕೃತಿಕೆ, ಹರೋಹರ ಹೀಗೆ ನಾನಾರೀತಿಯ ಹೆಸರುಗಳಿಂದ ಪ್ರಸಿದ್ದಿಯಾಗಿರುವ ಶಿವಮೊಗ್ಗದ ಗುಡ್ಡೆಕಲ್​ನ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ಜಾತ್ರೆ ವಿಜೃಂಭಣೆಯಿಂದ ನೆರವೇರಿತು. ವಿವಿಧೆಡೆಯಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದುದು, ಸುಬ್ರಹ್ಮಣ್ಯ ಸ್ವಾಮಿ ಜಾತ್ರೆಗೆ ಕಳೆಗಟ್ಟಿತ್ತು.ಈ ಬಾಲಸುಬ್ರಹ್ಮಣ್ಯ ಸ್ವಾಮಿ ಜಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿ, ಶ್ರೀ ದೇವರ ಆಶೀರ್ವಾದ ಪಡೆದರು. ಜೊತೆಗೆ ಬಾಲಸುಬ್ರಹ್ಮಣ್ಯನಲ್ಲಿ, ಹರಕೆ, ಪೂಜೆ ಸಲ್ಲಿಸಿದರು.

ಇನ್ನು ಜಾತ್ರೆಯಲ್ಲಿ, ದೇವಾಲಯದ ಆವರಣದಲ್ಲಿ, ಕೆನ್ನೆಗೆ ತ್ರಿಶೂಲ ಚುಚ್ಚಿಕೊಂಡು ಕಾವಡಿ ಹೊತ್ತ ಭಕ್ತರು, ಸಾಲಾಗಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆನ್ನೆಗೆ, ನಾಲಿಗೆಗೆ, ಕಿವಿಗೆ ಚುಚ್ಚಿಕೊಂಡು ಹರಕೆ ಹೊತ್ತವರು, ತಮ್ಮ ಹರಕೆಯನ್ನು ತೀರಿಸಿದರು. ಇನ್ನು ತಮಿಳು ಜನಾಂಗದವರೇ ಹೆಚ್ಚಾಗಿ ಆಚರಿಸುವ ಈ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ, ವಿಶಿಷ್ಟ ಪೂಜಾ-ಕೈಂಕರ್ಯಗಳು ವಿಶೇಷವಾಗಿ ನೆರವೇರಿಸಲಾಯಿತು. ಅದೇ ರೀತಿ ದೇವಾಲಯದಲ್ಲಿ, ಶ್ರೀ ದೇವರ ಅಲಂಕಾರ ಆಕರ್ಷಕವಾಗಿತ್ತು. ಭಕ್ತರು ಸಾಲಾಗಿ ನಿಂತು ದೇವರ ದರುಶನ ಪಡೆದು, ಭಕ್ತಿ ಪರವಶರಾದರು.

ಒಟ್ಟಿನಲ್ಲಿ ಆಷಾಢದಲ್ಲಿ ನಡೆಯುವ ಗುಡ್ಡೆಕಲ್​ನ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಜಾತ್ರೆಯಲ್ಲಿ, ಕಳೆದ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಮಳೆ ಇಲ್ಲದಿರುವುದೇ ಜಾತ್ರೆ ವಿಶೇಷವಾಗಿತ್ತು.

ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ

Exit mobile version