Site icon PowerTV

ಆನೆ ಹತ್ಯೆ ಪ್ರಕರಣ: ಪ್ರಜ್ವಲ್ ‌ರೇವಣ್ಣ ವಿರುದ್ಧ ಬೊಮ್ಮಾಯಿಗೆ ಮನೇಕಾ ಗಾಂಧಿ ಪತ್ರ

ಹಾಸನ: ಆನೆಯನ್ನು ಕೊಂದು ಹೂತು ಹಾಕಿದ್ದ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ಚಲ್ ರೇವಣ್ಣ ಆರೋಪಿಗಳ ರಕ್ಷಣೆಗೆ ಒತ್ತಡ ಹೇರುತ್ತಿದ್ದಾರೆ ಎಂದು ಸಂಸದೆ ಮನೇಕಾ ಗಾಂಧಿ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಹಾಸನ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ ಅಕ್ರಮವಾಗಿ ವಿದ್ಯುತ್ ಹರಿಸಿ‌ ಆನೆಯನ್ನು ಕೊಂದು ಹೂತು ಹಾಕಲಾಗಿತ್ತು. ಬಳಿಕ ಸತ್ತ ಆನೆಯಿಂದ ದಂತ ಕತ್ತರಿಸಿ ಮಾರಾಟ ಮಾಡುವ ವೇಳೆ ಪ್ರಯತ್ನದಲ್ಲಿದ್ದಾಗ ಮಾರ್ಚ್ 19 ರಂದು ಬೆಂಗಳೂರಿನ ಸಿ.ಕೆ ಅಚ್ಚುಕಟ್ಟು ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದರು.

ಈ ಪ್ರಕರಣದಲ್ಲಿ ಅರಣ್ಯ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಸ್ಥಳೀಯ ವಲಯ ಅರಣ್ಯ ಅಧಿಕಾರಿ ಭಾರಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಮನೇಕಾ ಗಾಂಧಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳು ಸಂಸದ ಪ್ರಜ್ವಲ್ ರೇವಣ್ಣ ಬೆಂಬಲಿಗರು ಎಂಬ ಕಾರಣಕ್ಕೆ ಅವರ ಪರವಾಗಿ ಸಂಸದರು ಒತ್ತಡ ಹೇರುತ್ತಿದ್ದಾರೆ. ಅಲ್ಲದೇ ಆರೋಪಿಗಳ ರಕ್ಷಣೆ ಮಾಡಲು ಹಾಸನ ಅರಣ್ಯ ಇಲಾಖೆ ಆರ್.ಎಫ್. ಓ ಪ್ರಯತ್ನ ಮಾಡಿದ್ದಾರೆ. ಪ್ರಕರಣ ವರ್ಗಾಯಿಸಲು ಪದೇ ಪದೇ ಕೇಸ್ ಹಾಕಿ ಅಚ್ಚುಕಟ್ಟು ಪ್ರದೇಶದ ಪೊಲೀಸರಿಗೆ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಹೀಗಾಗಿ ಮುಖ್ಯಮಂತ್ರಿ ಅವರು ಮಧ್ಯಪ್ರವೇಶ ಮಾಡಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಜುಲೈ 18 ರಂದು ಬರೆದ ಪತ್ರದಲ್ಲಿ ಮನೇಕಾ ಗಾಂಧಿ ಒತ್ತಾಯಿಸಿದ್ದಾರೆ.

against 
Exit mobile version