Site icon PowerTV

ನಂದಿನಿ ಮೊಸರು, ಲಸ್ಸಿ, ಮಜ್ಜಿಗೆ ದರ ಅಲ್ಪ ಇಳಿಕೆ

ಬೆಂಗಳೂರು: ನಂದಿನಿ ಮೊಸರು, ಲಸ್ಸಿ ಮತ್ತು ಮಜ್ಜಿಗೆ ದರಗಳನ್ನು ಸೋಮವಾರ ಮತ್ತೆ ಪರಿಷ್ಕರಿಸಲಾಗಿದೆ.

ಈ ಎಲ್ಲ ಹಾಲಿನ ಉತ್ಪನ್ನಗಳ ದರವನ್ನು 50 ಪೈಸೆಯಿಂದ ರೂ.1.50ರಷ್ಟು ಕಡಿಮೆ ಮಾಡಲಾಗಿದೆ. ಭಾನುವಾರ ಈ ಉತ್ಪನ್ನಗಳ ದರಗಳನ್ನು ರೂ.1ರಿಂದ ರೂ.3ರಷ್ಟು ಹೆಚ್ಚಿಸಲಾಗಿತ್ತು. ಗ್ರಾಹಕರಿಂದ ಬೆಲೆ ಏರಿಕೆಗೆ ಅಸಮಾಧಾನ ವ್ಯಕ್ತವಾಗಿದ್ದರಿಂದ ಕೆಎಂಎಫ್‌ ಈ ಕ್ರಮ ಕೈಗೊಂಡಿದೆ.

ಪರಿಷ್ಕರಿಸಿದ ದರಗಳ ಅನ್ವಯ 200 ಗ್ರಾಂ ಮೊಸರಿಗೆ ರೂ.10.50ಕ್ಕೆ ನಿಗದಿಪಡಿಸಲಾಗಿದೆ. ಇದರಿಂದ, ಮೂಲ ಹಿಂದಿನ ದರಕ್ಕಿಂತ 50 ಪೈಸೆಯಷ್ಟು ಮಾತ್ರ ಹೆಚ್ಚಿಸಿದಂತಾಗಿದೆ.

200 ಮಿ.ಲೀ. ಸ್ಯಾಚೆಯ ಮಜ್ಜಿಗೆ ದರವು ರೂ.7 ರಿಂದ ರೂ.8ಕ್ಕೆ ಹೆಚ್ಚಿಸಲಾಗಿತ್ತು. ಪರಿಷ್ಕೃತ ದರಗಳ ಅನ್ವಯ ರೂ.7.50ಕ್ಕೆ ನಿಗದಿಪಡಿಸಲಾಗಿದೆ.

ಇದೇ ರೀತಿ, 200 ಮಿ.ಲೀ. ಸ್ಯಾಚೆಯ ಲಸ್ಸಿ ದರವನ್ನು ರೂ.10ರಿಂದ 11ಕ್ಕೆ ಹೆಚ್ಚಿಸಲಾಗಿತ್ತು. ಈಗ, ಹೊಸ ದರಗಳ ಅನ್ವಯ ರೂ.10.50ಕ್ಕೆ ನಿಗದಿಪಡಿಸಲಾಗಿದೆ.

ಗ್ರಾಹಕರ ಹಿತದೃಷ್ಟಿಯಿಂದ ಜುಲೈ 19ರಿಂದ ಜಾರಿಗೆ ಬರುವಂತೆ ‘ನಂದಿನಿ’ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮಾರಾಟ ದರಗಳನ್ನು ಮತ್ತೊಮ್ಮೆ ಮರುಪರಿಷ್ಕರಿಸಲಾಗಿದೆ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version