ಬೆಂಗಳೂರು : ಸಿಲಿಕಾನ್ ಸಿಟಿ ಬೆಳೆದಂತೆ ಸಂಚಾರ ದಟ್ಟಣೆ ಕೂಡ ಹೆಚ್ಚಾಗ್ತಿದೆ. ಹೀಗಾಗಿ ದಟ್ಟಣೆ ನಿಯಂತ್ರಿಸಬೇಕು ಅಂತ ಸರ್ಕಾರ ಒಂದಲ್ಲ ಒಂದು ಪ್ಲ್ಯಾನ್ ಮಾಡ್ತಾನೆ ಇದೆ.ಆದ್ರೂ ಪ್ರಮುಖ ಜಂಕ್ಷನ್ಗಳಲ್ಲಿ ಓಡಾಟ ಮಾಡೋದು ಸವಾಲಿನ ಕೆಲಸ. ಅದ್ರಲ್ಲೂ ನಗರದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಹೊಂದಿರುವ ಚಾಲುಕ್ಯ ಸರ್ಕಲ್‌ನಲ್ಲಿ ಪಾದಚಾರಿಗಳು ರಸ್ತೆ ದಾಟಬೇಕೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡೇ ಓಡಾಡಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ನಿಶ್ಚಿತ. ಹೀಗಾಗಿ ಬಿಡಿಎ ಚಾಲುಕ್ಯ ಸರ್ಕಲ್‌ನಲ್ಲಿ ಹೊಸ ಯೋಜನೆ ರೂಪಿಸಲು ಮುಂದಾಗಿದೆ.
ಚಾಲುಕ್ಯ ಸರ್ಕಲ್‌ನಲ್ಲಿ ಸುಸಜ್ಜಿತ ಹಾಗೂ ಹೈಟೆಕ್ ಮಾದರಿಯ ಸ್ಕೈವಾಕ್ ನಿರ್ಮಾಣ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.ಈ ವರ್ತುಲ ಆಕಾರದ ಸ್ಕೈವಾಕ್ ದೇಶದಲ್ಲೇ ಮೊದಲು ಎಂದು ಹೇಳಲಾಗುತ್ತಿದೆ. ಆರು ರಸ್ತೆಗಳು ಸೇರುವ ಈ ಸರ್ಕಲ್‌ನಲ್ಲಿ ಯಾವುದೇ ರಸ್ತೆಯಿಂದ ಬರುವ ಪಾದಚಾರಿಗಳು ಈ ಸ್ಕೈವಾಕ್ ಮೇಲೆ ಹತ್ತಿದರೆ ಯಾವುದೇ ಭಾಗಕ್ಕೂ ಇಳಿದುಕೊಳ್ಳಬಹುದು.
ಸ್ಕೈವಾಕ್ ಮೇಲೆ ಸಂಚರಿಸಲು ಕೆಲವರಿಗೆ ಆತಂಕ ಇರುತ್ತೆ. ಟ್ರಾಫಿಕ್ ಮಧ್ಯೆಯೇ ರಸ್ತೆ ದಾಟುತ್ತಾರೆ. ಹೀಗಾಗಿ ಸ್ಕೈವಾಕ್ ಮೇಲೆ ಹತ್ತಲು ಲಿಫ್ಟ್ ಇಲ್ಲವೇ ಎಸ್ಕಲೇಟರ್ ಅಳವಡಿಸಲಾಗುವುದು. ಇದರಿಂದ ವಯಸ್ಸಾದವರು, ವಿಶೇಷ ಚೇತನರು, ಮಕ್ಕಳು ಸುಲಭವಾಗಿ ಮೇಲೇರಲು ಅನುಕೂಲವಾಗುತ್ತೆ. ಇಂಥಾ ಪ್ರಸ್ತಾವನೆಯನ್ನು ಬಿಡಿಎ ಸಿದ್ಧಪಡಿಸುತ್ತಿದ್ದು, ಸರ್ಕಾರದ ಒಪ್ಪಿಗೆ ಪಡೆದು ಹೈಟೆಕ್ ಸ್ಕೈವಾಕ್ ಮಾಡುತ್ತೇವೆ ಅಂತ ಬಿಡಿಎ ಅಧ್ಯಕ್ಷರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಚಾಲುಕ್ಯ ಸರ್ಕಲ್‌ನಲ್ಲಿ ರಸ್ತೆ ದಾಟುವುದು ಸವಾಲಿನ ಕೆಲಸವೇ ಆಗಿದೆ. ಹೀಗಾಗಿ ಜನರ ಅನುಕೂಲಕ್ಕೆ ಮೊದಲ ಬಾರಿಗೆ ಹೈಟೆಕ್ ಮಾದರಿಯ ಸ್ಕೈವಾಕ್ಗೆ ಬಿಡಿಎ ಪ್ಲ್ಯಾನ್ ಮಾಡಿದೆ. ಅದಷ್ಟು ಬೇಗ ಸ್ಕೈವಾಕ್ ನಿರ್ಮಿಸಿ ಚಾಲುಕ್ಯ ಸರ್ಕಲ್‌ನಲ್ಲಿ ಟ್ರಾಫಿಕ್ ದಟ್ಟಣೆಗೆ ಕಡಿವಾಣ ಹಾಕ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು


