ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಚ್ಚರಿಯ ಹೆಸರು ಸೂಚಿಸಿ ಶಾಕ್ ನೀಡಿದ್ದ ಬಿಜೆಪಿ, ನಾಮನಿರ್ದೇಶನದಲ್ಲೂ ನಾಲ್ಕು ಮಹಾನ್ ಚೇತನಗಳನ್ನ ನೇಮಕ ಮಾಡಿ ಬಿಗ್ ಸರ್ಪ್ರೈಸ್ ನೀಡಿದೆ. ಈ ನಾಲ್ವರಲ್ಲಿ ಬಾಹುಬಲಿ ಕಥೆಗಾರ ಹಾಗೂ ಸಂಗೀತ ಲೋಕದ ಮಾಂತ್ರಿಕ ಕೂಡ ಸೇರಿದ್ದಾರೆ. ಈ ಸುದ್ದಿ ಕೇಳಿ ಇಡೀ ಭಾರತೀಯ ಚಿತ್ರರಂಗ ಹರ್ಷ ವ್ಯಕ್ತಪಡಿಸಿದೆ.
ರಾಜ್ಯಸಭೆಯತ್ತ ರಾಜಮೌಳಿ ತಂದೆ & ಇಳಯರಾಜ
ಸಿನಿಮಾ ಮತ್ತು ಸಂಗೀತ ಕ್ಷೇತ್ರಕ್ಕೆ ಭರ್ಜರಿ ಉಡುಗೊರೆ

ದಕ್ಷಿಣ ಭಾರತೀಯರಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ನಾಲ್ಕು ಧೃವತಾರೆಗಳ ಸೇರ್ಪಡೆಯಿಂದಾಗಿ ರಾಜ್ಯಸಭೆಗೆ ಹೊಸ ಕಳೆ ಬಂದಿದೆ. ಯೆಸ್.. ಈ ಬಾರಿ ನೇಮಕವಾಗಿರೋ ನಾಲ್ಕು ಚೇತನಗಳು ತಮ್ಮದೇ ಕ್ಷೇತ್ರದಲ್ಲಿ ಇಡೀ ವಿಶ್ವವೇ ಕೊಂಡಾಡುವ ಹಾಗೆ ಹೆಸರು ಮಾಡಿದವರು. ಎಲ್ಲರಿಗೂ ಚಿರಪರಿಚಿತರಾದ ಹೆಮ್ಮೆಯ ಈ ಸಾಧಕರು ರಾಜ್ಯಸಭೆಯಲ್ಲಿ ಕಳಸವಾಗಿ ಶೋಭಿಸುವ ಕಾಲ ಕೂಡಿ ಬಂದಿದೆ.
ನ್ಯಾಯ, ನೀತಿ, ಮೂರ್ತಿ ವೆತ್ತ ಸತ್ಯ ಧೈವದ ಆರಾಧಕರು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಸಂಗೀತದ ದೇವರು, ಕಲಾಸರಸ್ವತಿ ಪುತ್ರರು, ತಾಯಿ ಮೂಕಾಂಬಿಕಾ ಭಕ್ತರಾದ ಇಳಯರಾಜ, ಕೇರಳದ ಜಿಂಕೆಮರಿ ಪಿಟಿ ಉಷಾ, ಬಾಹುಬಲಿ, ಮಗಧೀರ, RRR ಸಿನಿಮಾಗಳ ಅಪ್ರತಿಮ ಕಥೆಗಾರ ವಿಜಯೇಂದ್ರ ಪ್ರಸಾದ್ ಆಯ್ಕೆಯಾದ ನಾಲ್ಕು ಅದ್ಭುತ ಸಾಧಕರು.
ಭಾಷೆ, ಕ್ಷೇತ್ರಗಳ ತಾರತಮ್ಯ ಮೀರಿ ದಕ್ಷಿಣ ಭಾರತದ ಮೇರು ಪ್ರತಿಭೆಗಳನ್ನ ಆಯ್ಕೆ ಮಾಡಿದ್ದು, ಎಲ್ಲರಿಗೂ ಹಾಲು ಕುಡಿದಷ್ಟು ಆನಂದವಾಗಿದೆ. ಖ್ಯಾತ ನಿರ್ದೇಶಕ ರಾಜಮೌಳಿ ತಂದೆಯಾಗಿರೋ ವಿಜಯೇಂದ್ರ ಪ್ರಸಾದ್ ತಮ್ಮ ವಿಭಿನ್ನ ಕಥೆಗಳ ಮೂಲಕ ಜಗತ್ತೇ ನಿಬ್ಬೆರಗಾಗುವ ಮಟ್ಟಿಗೆ ಹೆಸರು ಮಾಡಿದವ್ರು. ಇದೀಗ ಟಾಲಿವುಡ್ನ ಹೆಮ್ಮೆಯ ಪ್ರತಿನಿಧಿಯಾಗಿ ರಾಜ್ಯಸಭೆ ಪ್ರವೇಶ ಮಾಡ್ತಿದ್ದಾರೆ.

ಸಂಗೀತದ ಆಲಾಪನೆಗೆ ಯಾವುದೇ ಜಾತಿ, ಮತ, ಭಾಷೆಯ ಹಂಗಿಲ್ಲ. ಇಳಯರಾಜ ಅವರ ಸಂಗೀತಕ್ಕೆ ಇಡೀ ವಿಶ್ವವೇ ತಲೆದೂಗಿದೆ. ಸಿನಿಮಾ ಹಾಗೂ ಸಂಗೀತಕ್ಕೆ ಈ ಮಹಾನ್ ಚೇತನರಿಂದ ರಾಜಮರ್ಯಾದೆ ಸಿಕ್ಕಿದೆ. ಅವರ ಕಾಣಿಕೆಯಲ್ಲಿ ಸಿಕ್ಕ ಹಾಡುಗಳು ಅಜರಾಮರ ಹಾಗೂ ಅವಿಸ್ಮರಣೀಯ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಸಂಗೀತದ ಸ್ವರ ಮಾಧುರ್ಯ ಹರಿಸಿದ ಸರಸ್ವತಿ ಪುತ್ರ ಇಳಯರಾಜ. ಇಂತಹ ಅಧಮ್ಯ ಚೇತನ, ಮಹನೀಯರಿಗೆ ಈ ಗೌರವ ಸಿಕ್ಕಿದ್ದು ಹೆಮ್ಮೆ ಪಡುವ ಸಂಗತಿ.
ರಾಜ್ಯಸಭೆಗೆ ಈ ನಾಲ್ಕು ಜನ ಅರ್ಹರನ್ನು ಗುರುತಿಸಿ ದೇಶ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಕೇಂದ್ರ ಸರ್ಕಾರಕ್ಕೆ ಮೆಚ್ಚುಗೆಯ ಮಹಾಪೂರ ಸಿಕ್ಕಿದೆ.
ರಾಕೇಶ್ ಅರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ


