ಬೆಂಗಳೂರು : ಪಿಎಸ್ಐ ಮತ್ತು 40% ಕಮಿಷನ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಲೆ ಇದೆ. ಅದರಲ್ಲೂ ಪಿಎಸ್ಐ ಹಗರಣದಲ್ಲಿ ಎಡಿಜಿಪಿ ಬಂಧನವಾದ ಬಳಿಕ ಕೈ ನಾಯಕರು ಕೇಸರಿ ಪಡೆ ಮೇಲೆ ಮುಗಿಬಿದ್ದಿದ್ರು. ಸರ್ಕಾರದ ಕುಮ್ಮಕ್ಕು ಇಲ್ಲದೆ ಭ್ರಷ್ಟಾಚಾರ ನಡೆಯೋಕೆ ಸಾಧ್ಯವಿಲ್ಲ ಅಂತ ಆರೋಪ ಮಾಡಿದ್ರು. ಮಾಜಿ ಸಿಎಂ ಪುತ್ರ ವಿಜಯೇಂದ್ರ ಮತ್ತು ಸಚಿವ ಅಶ್ವತ್ಥ್ ನಾರಾಯಣ್ ಕೈವಾಡ ಇದೆ ಅಂತ ಗಂಭೀರ ಆರೋಪ ಮಾಡಿದ್ರು. ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತೀರುಗೇಟು ನೀಡುವ ಪ್ರಯತ್ನ ಮಾಡುತ್ತಿದೆ. ನಾವು ಪಾರದರ್ಶಕ ತನಿಖೆ ನಡೆಸಿ ಆರೋಪಿಗಳ ಬಂಧಿಸುವ ಕೆಲಸ ಮಾಡಿದ್ದೇವೆ. ಸುಖಾಸುಮ್ಮನೆ ಬಿಜೆಪಿ ಮೇಲೆ ಆರೋಪ ಮಾಡಬೇಡಿ. ಕಾಂಗ್ರೆಸ್ ಕಾಲದಲ್ಲಿ ಆದ ಅಕ್ರಮಗಳನ್ನು ಬಿಚ್ಚಿಡ್ತೇವೆ ಅಂತ ಸಿಎಂ ಮತ್ತು ಗೃಹ ಸಚಿವರು ಎಚ್ಚರಿಸಿದ್ರು.
ಇನ್ನು ಬಿಜೆಪಿ ಸರ್ಕಾರದ ಆರೋಪಕ್ಕೆ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಈಗ ಬಿಜೆಪಿ ಸರ್ಕಾರದ ಮೇಲೆ ಆರೋಪಗಳು ಬಂದ ತಕ್ಷಣ ಕಾಂಗ್ರೆಸ್ ಮೇಲೆ ಗೂಬೆ ಕುರಿಸುವ ಕೆಲಸ ಮಾಡುತ್ತಿದ್ದಾರೆ. ಪಿಎಸ್ಐ ಹಗರಣದಲ್ಲಿ ನ್ಯಾಯಯುತವಾಗಿ ತನಿಖೆ ನಡೆದ್ರೆ, ಸರ್ಕಾರ ಬಿದ್ದು ಹೋಗುತ್ತೆ. ಹಾಗಾಗಿ ಗಮನ ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಸರ್ಕಾರದಲ್ಲಿ ಅಕ್ರಮ ಆಗಿವೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ಅಕ್ರಮ ಆಗಿದೆ ಅನ್ನೋದೆ ಆದ್ರೆ ವಿರೋಧ ಪಕ್ಷವಾಗಿ ಬಿಜೆಪಿ ನಾಯಕರು ಕಡ್ಲೆಪುರಿ ತಿಂತಾ ಇದ್ರಾ ಅಂತ ಕೈ ನಾಯಕರು ಆಕ್ರೋಶ ಹೊರ ಹಾಕಿದ್ರು. ಒಂದು ವೇಳೆ ಅಕ್ರಮ ನಡೆದಿದ್ದೆ ಆದ್ರೆ, ದಾಖಲೆ ಸಮೇತ ಸಿಎಂ ಮತ್ತು ಗೃಹ ಸಚಿವರು ಮಾತನಾಡಲಿ ಅಂತ ಸವಾಲು ಹಾಕಿದ್ದಾರೆ.
ಒಟ್ಟಿನಲ್ಲಿ ಅಕ್ರಮ ಹಾಗೂ ಹಗರಣಗಳ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ಶುರುವಾಗಿದೆ. ಚುನಾವಣೆ ಹತ್ತಿರವಾಗ್ತಿದ್ದು, ಇನ್ನಷ್ಟು ಆರೋಪ ಪ್ರತ್ಯಾರೋಪಗಳು ಹೆಚ್ಚಾಗುವ ಎಲ್ಲ ಲಕ್ಷಣಗಳು ಕಾಣ್ತಿವೆ.


