Site icon PowerTV

ನೂಪುರ್​ ಶರ್ಮಾ ದೇಶದ ಜನರ ಕ್ಷಮೆ ಕೇಳ್ಬೇಕು: ಸುಪ್ರೀಂ ಕೋರ್ಟ್​ ಸೂಚನೆ

ಹೊಸದಿಲ್ಲಿ : ದೇಶಾದ್ಯಂತ ನಡೆದಿರುವ ಎಲ್ಲಾ ಹಿಂಸಾಚಾರ ಘಟನೆಗಳಿಗೂ ನೂಪುರ್ ಶರ್ಮಾ ಅವರೇ ಕಾರಣ ಎಂದಿರುವ ಸುಪ್ರೀಂ ಕೋರ್ಟ್, ನೂಪುರ್ ಶರ್ಮಾ ಅವರು ಇಡೀ ದೇಶವನ್ನು ಉದ್ದೇಶಿಸಿ ಕ್ಷಮೆ ಕೇಳಬೇಕು ಎಂದು ತಾಕೀತು ಮಾಡಿದೆ.

ಪ್ರವಾದಿ ಮೊಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಹೊತ್ತಿರುವ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್‌ ತೀವ್ರ ಆಕ್ರೋಶ ಹೊರ ಹಾಕಿದೆ. ತಮ್ಮ ವಿರುದ್ಧ ದೇಶಾದ್ಯಂತ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನೂ ಒಂದುಗೂಡಿಸಿ ವಿಚಾರಣೆ ನಡೆಸಬೇಕು ಎಂದು ನೂಪುರ್ ಶರ್ಮಾ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್, ಉದಯಪುರ ಘಟನೆ ಸೇರಿದಂತೆ ದೇಶಾದ್ಯಂತ ನಡೆದ ಎಲ್ಲಾ ಹಿಂಸಾಚಾರ ಘಟನೆಗಳಿಗೂ ನೂಪುರ್ ಶರ್ಮಾ ನಾಲಗೆ ಹರಿಬಿಟ್ಟಿದ್ದೇ ಕಾರಣ ಎಂದು ಹರಿಹಾಯ್ದಿದೆ.

ಅಲ್ಲದೇ ನೂಪುರ್ ಶರ್ಮಾ ತಮ್ಮ ಬೇಜವಾಬ್ದಾರಿ ಮಾತುಗಳಿಂದ ಇಡೀ ದೇಶಕ್ಕೇ ಬೆಂಕಿ ಹಚ್ಚಿದರು ಎಂದು ಸುಪ್ರೀಂ ಕೋರ್ಟ್‌ ಕಿಡಿಕಾಡಿದ್ದಾರೆ.

ಬಿಜೆಪಿ ಮಾಜಿ ವಕ್ತಾರ ನೂಪುರ್ ಶರ್ಮಾ ತಮ್ಮ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾದ ಎಲ್ಲಾ ಪ್ರಕರಣಗಳನ್ನ ದೆಹಲಿಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನೂಪುರ್ ಶರ್ಮಾ ವಿರುದ್ಧ ದೆಹಲಿ, ಕೋಲ್ಕತಾ, ಬಿಹಾರದಿಂದ ಪುಣೆವರೆಗೆ ಅನೇಕ ಪ್ರಕರಣಗಳು ದಾಖಲಾಗಿವೆ.

ನೂಪುರ್ ಶರ್ಮಾ ತಮಗೆ ನಿರಂತರವಾಗಿ ಕೊಲೆ ಬೆದರಿಕೆಗಳು ಬರುತ್ತಿದ್ದು, ವಿವಿಧ ರಾಜ್ಯಗಳಲ್ಲಿ ವಿಚಾರಣೆಗೆ ಹಾಜರಾಗುವುದರಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿದರು. ಆದ್ದರಿಂದ, ವಿವಿಧ ರಾಜ್ಯಗಳಲ್ಲಿ ದಾಖಲಾದ ಎಲ್ಲಾ ಪ್ರಕರಣಗಳ ವಿಚಾರಣೆಗಾಗಿ ಸುಪ್ರೀಂಕೋರ್ಟ್ ಪ್ರಕರಣಗಳನ್ನ ದೆಹಲಿಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version