Site icon PowerTV

ಚಾರ್ಮಾಡಿ ಘಾಟ್​ ; ಪ್ರವಾಸಿಗರ ಮೋಜು ಮಸ್ತಿ, ಸ್ಥಳೀಯರಿಗೆ ಟ್ರಾಫಿಕ್​​ ಬಿಸಿ

ಚಿಕ್ಕಮಗಳೂರು: ಪ್ರವಾಸಿಗರು ಜಾರು ಬಂಡೆಗಳ ಮೇಲೆ ಹತ್ತಿ ಹುಚ್ಚಾಟ ಮಾಡುತ್ತಾ, ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡುತ್ತಾ, ಟಿಕ್‍ಟಾಕ್ ಮಾಡ್ತಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.

ಚಾರ್ಮಾಡಿ ಘಾಟಿಯಲ್ಲಿ ರಸ್ತೆಯುದ್ಧಕ್ಕೂ ಜಲಪಾತಗಳಿವೆ. ಅಲ್ಲಿನ ಕಲ್ಲು ಬಂಡೆಗಳ ಮೇಲೆ ನಿರಂತರವಾಗಿ ನೀರು ಬಿದ್ದು ಕಲ್ಲಿನ ಮೇಳೆ ಪಾಚಿ ಬೆಳೆದು ಸಿಕ್ಕಾಪಟ್ಟೆ ಜಾರುತ್ತೆ. ಅಲ್ಲಿಂದ ಬಿದ್ದರೆ ಕೈ-ಕಾಲು ಮುರಿದು ಹೋಗುವುದರಲ್ಲಿ ಅನುಮಾನವಿಲ್ಲ. ಆದರೆ, ಕೆಲ ಹುಚ್ಚು ಪ್ರವಾಸಿಗರು ಅಂತಹಾ ಜಾರುವ ಬಂಡೆಗಳ ಮೇಲೆ ಹತ್ತಿ ಮೋಜು-ಮಸ್ತಿ ಮಾಡ್ತಿದ್ದಾರೆ. ಈ ಹಿಂದೆ ಕೂಡ ಜಲಪಾತಗಳ ಮೇಲೆ ಹತ್ತಿ ಬಿದ್ದು ಕೈ-ಕಾಲು ಮುರಿದುಕೊಂಡು, ತಲೆ ಹೊಡೆದುಕೊಂಡವರಿದ್ದಾರೆ.

ಕೆಲವರದ್ದು ಪ್ರಾಣವೂ ಹೋಗಿದೆ. ಆದರೂ, ಪ್ರವಾಸಿಗರು ಈ ಹುಚ್ಚಾಟ ಬಿಟ್ಟಿಲ್ಲ. ಚಾರ್ಮಾಡಿ ಘಾಟಿ ರಸ್ತೆ ಅತ್ಯಂತ ಕಿರಿದಾದ ರಸ್ತೆ. ಇಲ್ಲಿ ಎರಡು ವಾಹನಗಳು ಸಲೀಸಾಗಿ ಹೋಗುವುದೇ ಕಷ್ಟ. ಇಂತಹಾ ಕಿರಿದಾದ ರಸ್ತೆಯಲ್ಲಿ ಪ್ರವಾಸಿಗರು ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡುತ್ತಿದ್ದು ವಾಹನ ಸವಾರರು ತೀವ್ರ ಸಂಕಷ್ಟ ಪಡುವಂತಾಗಿದೆ. ಟ್ರಾಫಿಕ್ ಜಾಮ್ ಆಗಿದ್ದರೂ ಪ್ರವಾಸಿಗರ ಹುಚ್ಚಾಟ ಬಿಡುತ್ತಿಲ್ಲ. ಕೆಲವರಿಗೆ ರಸ್ತೆ ಮಧ್ಯೆ ಟಿಕ್‍ಟಾಕ್ ಮಾಡೋ ಶೋಕಿಯೂ ಇದೆ. ಹಾಗಾಗಿ, ಪ್ರವಾಸಿಗರೇ ಪ್ರವಾಸಿಗರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಪೊಲೀಸರು ಸೂಕ್ರ ಕ್ರಮಕೈಗೊಳ್ಳಬೇಕು. ಇಲ್ಲಿ ಆಗಾಗ್ಗೆ ಗಸ್ತು ತಿರುಗುತ್ತಾ, ಬಂಡೆಗಳ ಮೇಲೆ ಹತ್ತುವವರು, ರಸ್ತೆ ಮಧ್ಯೆ ಟ್ರಾಫಿಕ್ ಜಾಮ್ ಮಾಡುವವರ ವಿರುದ್ಧ ಸೂಕ್ರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಸಚಿನ್ ಶೆಟ್ಟಿ ಪವರ್​​ ಟಿವಿ, ಚಿಕ್ಕಮಗಳೂರು

Exit mobile version