Site icon PowerTV

ಪುರಾತನ ಗುಹೆ ಕುಸಿತ ಆತಂಕದಲ್ಲಿ ನಿವಾಸಿಗಳು

ಹುಬ್ಬಳ್ಳಿ : ಒಂದು ಕಡೆಗೆ ಕುಸಿದಿರುವ ಪುರಾತನ ಗುಹೆ, ‌ಮತ್ತೊಂದೆಡೆ ಕುಸಿದ ಗುಹೆ ಮೇಲೆ ಆತಂಕದಿಂದ ಜೀವನ ನಡೆಸುತ್ತಿರುವ ಕುಟುಂಬಗಳು ಈ ದೃಶ್ಯಗಳು ಕಂಡುಬಂದಿದ್ದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ. ಹೌದು, ಹೀಗೆ ಕುಸಿದಿರುವ ಗುಹೆ ಚಾಲುಕ್ಯರ ಕಾಲದ್ದು, ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಗುಹೆಯನ್ನು ರಾಜ ಮಹಾರಾಜರು ಯುದ್ಧದ ಸಮಯದಲ್ಲಿ ತಮ್ಮ ರಕ್ಷಣೆಗಾಗಿ ಬಳಸಿಕೊಳ್ಳುತ್ತಿದ್ದರಂತೆ. ಅಲ್ಲದೇ ಗುಹೆಯಲ್ಲಿ ಗವಿಸಿದ್ದೇಶ್ವರ ದೇಗುಲ ಕೂಡಾ ಇತ್ತಂತೆ ಆದರೆ ಇಂತಹ ಇತಿಹಾಸ ಪ್ರಸಿದ್ಧ ಗುಹೆ ಕಳೆದ ಕೆಲವು ದಿನಗಳ ಹಿಂದೆ ಗುಹೆ ಕುಸಿಯುತ್ತಿದ್ದು, ಪರಿಣಾಮವಾಗಿ ಪುರಾತನ ಗುಹೆ ಸಂಪೂರ್ಣ ಮುಚ್ಚಿ ಹೋಗುವ ಹಂತದಲ್ಲಿದೆ.

ಇನ್ನು ಗುಹೆ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಗುಹೆಯ ಅಕ್ಕಪಕ್ಕದ ‌ಮರಗಳು ನೆಲಕ್ಕೆ ಬಿದ್ದಿವೆ, ಸ್ಥಳೀಯರ ಮನೆಗಳಿಗೆ ಹಾನಿ ಉಂಟಾಗಿದ್ದು, ಮನೆ, ಶೌಚಾಲಯ, ಬಣವೆಗಳು ಯಾವಾಗ ಕುಸಿದು ಬೀಳುತ್ತವೆ ಎಂಬ ಆತಂಕದಲ್ಲಿ ಜೀವ ಭಯದಿಂದ ಟ್ಯಾಕ್ಟರ್ ಟೇಲರ್, ದನದ ಕೊಟ್ಟಿಗೆಯಲ್ಲಿ ಜನರು ವಾಸಿಸುವಂತಾಗಿದೆ.

ಈ ಹಿಂದೆ ಗುಹೆ ನೆಲಕ್ಕೆ ಬಿದ್ದಾಗ ಸ್ಥಳೀಯ ಶಾಸಕಿ ಕುಸುಮಾವತಿ ಶಿವಳ್ಳಿ, ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಸೇರಿದಂತೆ ಅಧಿಕಾರಿಗಳ ವರ್ಗ ಪರಿಶೀಲನೆ ನಡೆಸಿ ಗುಹೆ ಸುತ್ತ 50 ಮೀಟರ್ ವಾಸಿಸದಂತೆ ತಿಳಿಸಿದ್ದಾರೆ. ಆದರೆ ಇಲ್ಲಿನ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾತ್ರ ಮಾಡಿಲ್ಲ. ಎಚ್ಚರಿಕೆ ಎಂಬ ಬಿಳಿಹಾಳೆಯ ಬೋರ್ಡ್ ಹಾಕಲಾಗಿದ್ದು, ಸ್ಥಳದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್, ಅಥವಾ ಮನೆ ಬೀಳುವ ಹಂತದಲ್ಲಿರುವರಿಗೆ  ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲಾ. ಇದರಿಂದ ಜನ ಜಾನುವಾರು ಭಯದಿಂದ ಬೀದಿ ಬಯಲಲ್ಲೇ ಬದುಕು ನಡೆಸುತ್ತಿದ್ದಾರೆ.

Exit mobile version