Site icon PowerTV

ಕಳಪೆ ಡಾಂಬರೀಕರಣದ ಬಗ್ಗೆ ವರದಿ ಕೇಳಿದ ಪ್ರಧಾನಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಗಾಗಿ ಸಿಂಗಾರಗೊಳಿಸಿದ್ದ ರಸ್ತೆಗಳು ಮೂರೇ ದಿನಕ್ಕೆ ಹಾಳಾಗಿದ್ವು. ಡಾಂಬರ್ ಕಿತ್ತು ಬರ್ತಿರೋದನ್ನ ಪವರ್ ಟವಿ ರಿಯಾಲಿಟಿ ಚೆಕ್ ಜೊತೆ ವಿಸ್ತಾರವಾಗಿ ವರದಿ ಪ್ರಸಾರ ಮಾಡಿತ್ತು. ಅಷ್ಟೇ ಅಲ್ದೇ ಕಳಪೆ ಕಾಮಗಾರಿ ಬಗ್ಗೆ ಪ್ರಧಾನಿ ಕಚೇರಿಯಿಂದಲೂ ವರದಿ ಕೇಳಲಾಗಿತ್ತು. ಯಾವಾಗ ಪಿಎಂ ವರದಿ ಕೇಳಿದ್ರೋ ಎಚ್ಚೆತ್ತ ಬಿಬಿಎಂಪಿ ತಾನು ಮಾಡಿರೋ ತಪ್ಪನ್ನ ಹುಡುಕೋ ಕೆಲ್ಸಕ್ಕೆ ಮುಂದಾಗಿದೆ.

ಒಂದೂವರೆ ವರ್ಷಗಳ ಬಳಿಕ ಮೋದಿ ರಾಜ್ಯಕ್ಕೆ ಆಗಮಿಸಿದ್ರು. ಪ್ರಧಾನಿ ಬರ್ತಾರೆ ಅಂತ ರಾತ್ರೋರಾತ್ರಿ ಬಿಬಿಎಂಪಿ ಕೋಟಿಗಟ್ಟಲೇ ಖರ್ಚು ಮಾಡಿ ಡಾಂಬರ್ ಹಾಕಿತ್ತು. ಆದ್ರೆ ಆದು ಎರಡೇ ದಿನಗಳಲ್ಲಿ ಕಿತ್ತು ಬರ್ತಿರೋದನ್ನ ಪವರ್ ಟಿವಿ ಸವಿಸ್ತಾರವ ವರದಿಯನ್ನೂ ಪ್ರಸಾರ ಮಾಡಿತ್ತು. ಅಷ್ಟೇ ಅಲ್ದೇ ದೆಹಲಿಗೆ ತೆರಳಿದ್ದ ಸಿಎಂಗೆ ಪ್ರಶ್ನೆ ಮಾಡಿದಾಗ ವರದಿ ತರಿಸಿಕೊಳ್ತೀನಿ ಅಂತ ಹೇಳಿದ್ರು. ಯಾವಾಗಸಿಎಂ ವರದಿ ತರಿಸಿಕೊಳ್ತೀನಿ ಅಂತ ಹೇಳಿದ್ರೋ ಕಳಪೆ ಕಾಮಗಾರಿ ಮಾಡಿಸಿದ್ದ ಅಧಿಕಾರಿಗಳು ಫುಲ್ ಆಕ್ಟಿವ್ ಆದ್ರು. ಡಾಂಬರ್ ಕಿತ್ತು ಬರೋದಕ್ಕೆ ಕಳಪೆ ಕಾಮಗಾರಿಯಲ್ಲ. ಬದಲಾಗಿ ನೀರು & ಚರಂಡಿ‌ ಕೊಳವೆ ಸೋರಿಕೆಯಿಂದಾಗಿ ಡಾಂಬರ್ ಕಿತ್ತು ಬರುತ್ತೆ ಅಂತ ಸಮಜಾಯಿಷಿ ನೀಡಿದ್ರು.

ಇದ್ರ ನಡುವೆನೇ ಪ್ರಧಾನಿ ಕಚೇರಿಯಿಂದ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ವರದಿ ನೀಡುವಂತೆ ಸೂಚನೆ ಬಂದಿತ್ತು. ಇದರ ಬೆನ್ನಲ್ಲೇ ಮೂವರು ಇಂಜಿನಿಯರ್​ಗಳಿಗೆ ನೊಟೀಸ್ ಜಾರಿ ಮಾಡೋ ಕೆಲ್ಸವನ್ನ ಮುಖ್ಯ ಇಂಜಿನಿಯರ್ ಮಾಡಿದ್ರು. ಯಾವಾಗ ಪ್ರಧಾನಿ ಕಚೇರಿಯಿಂದ ಪತ್ರ ಬಂತೋ ನೋಡಿ ರಾತ್ರೋ ರಾತ್ರಿ ಅಧಿಕಾರಿಗಳನ್ನ ಸ್ಥಳಕ್ಕೆ ಕಳುಹಿಸೋ ಕೆಲ್ಸವನ್ನ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಡಿದ್ರು. ಅಷ್ಟೇ ಅಲ್ದೇ ಡಾಂಬರ್ ಹಾಕಿದ್ದರ ಬಗ್ಗೆ ಹಾಗೂ ಅದ್ರ ಗುಣಮಟ್ಟದ ಕುರಿತಂತೆ ವರದಿಯೊಂದನ್ನ ಸಿದ್ಧಪಡಿಸಿ ಮುಖ್ಯ ಕಾರ್ಯದರ್ಶಿ ಮೂಲಕ ಪ್ರಧಾನಿ ಕಚೇರಿಗೆ ತಲುಪಿಸೋದಾಗಿ ಹೇಳಿದರು.

ಒಂದು ಕಡೆ ಡಾಂಬರ್ ಹಾಕೋದರಲ್ಲಿ ಕಳಪೆ ಗುಣಮಟ್ಟ ಅನ್ನೋ ಆರೋಪ ಕೇಳಿ ಬರ್ತಿರೋ ಬೆನ್ನಲ್ಲೇ ಗುಣಮಟ್ಟದ ವೈಟ್ ಟಾಫಿಂಗ್ ರಸ್ತೆಯನ್ನ ಅಗೆದು ಡಾಂಬರೀಕರಣ ಮಾಡೋಕೆ ಪಾಲಿಕೆ ಮುಂದಾಗಿದೆ. ಈ ಕಾಮಗಾರಿ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮಾಹಿತಿನೇ ಇಲ್ಲದಿರೋದು ಪಾಲಿಕೆಯ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ, ಅದೇನೇ ಇರಲಿ, ಬಿಬಿಎಂಪಿಯ ಕಳಪೆಕಾಮಗಾರಿ ಬಗ್ಗೆ ಸ್ವತಃ ಪ್ರಧಾನಿ ಕಚೇರಿಯೇ ಮಾನಿಟರ್ ಮಾಡಲು ಮುಂದಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಪಾಲಿಕೆಯನ್ನ ಮುಜುಗರಕ್ಕೀಡಾಗುವಂತೆ ಮಾಡಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

Exit mobile version