Site icon PowerTV

ಕರುನಾಡ ಸಿರಿ ಸಂಚಾರಿ ವಿಜಯ್​​ ಪ್ರತಿಮೆಯ ಗರಿ

ಕರುನಾಡಿನ ಪಾಲಿಗೆ ಅಂದು ಕರಾಳ ದಿನ. ಕಲಾರಸಿಕರ ಹೃದಯ ಗೆದ್ದಿದ್ದ ಪ್ರತಿಭಾನ್ವಿತ ಕಲಾವಿದ ಸಂಚಾರಿ ವಿಜಯ್​, ತಮ್ಮ ಸಂಚಾರಕ್ಕೆ ಫುಲ್​ ಸ್ಟಾಪ್​​ ಇಟ್ಟಿದ್ರು. ಸಣ್ಣ ಸುಳಿವು ನೀಡದ ಕ್ರೂರ ಜವರಾಯನ ಕರೆಗೆ ಅದ್ಭುತ ಕಲಾವಿದನ ಉಸಿರು ನಿಂತು ಹೋಗಿತ್ತು. ಯೆಸ್​​. ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್​ ಸವಿನೆನಪಿಗಾಗಿ ಇಂದು ಹುಟ್ಟೂರಲ್ಲಿ ಪ್ರತಿಮೆ ನಿರ್ಮಾಣವಾಗಿದೆ. ರಾಷ್ಟ್ರ ಮೆಚ್ಚಿದ ನಾಯಕನ ಸಿನಿಜರ್ನಿಯ ಸುತ್ತಾ ಒಂದು ಇಣುಕು ನೋಟ.

ಸಂಚಾರಿ ವಿಜಯ್​​, ಈ ಹೆಸ್ರು ಕೇಳ್ತಿದ್ದ ಹಾಗೆ ಎದೆಯಲ್ಲಿ ಒಂದು ಸಂಚಲನ. ಕಣ್ಣಲ್ಲೇ ನಟಿಸೋ ಕಲಾಸರಸ್ವತಿ ಪುತ್ರ. ಇವ್ರ ಆಂಗಿಕ ಅಭಿನಯಕ್ಕೆ ಮನಸೋಲದವರಿಲ್ಲ. ಚಾಲೆಂಜಿಂಗ್​ ಪಾತ್ರಗಳನ್ನು ನೀರು ಕುಡಿದಷ್ಟೆ ಲೀಲಾಜಾಲವಾಗಿ ನಟಿಸೋ ಅಭುನಯ ಚತುರ. ಮಾತು, ನುಡಿ, ನಡತೆ, ಸಂಸ್ಕೃತಿ ಎಲ್ಲವೂ ಸಂಚಾರಿ  ವಿಜಯ್​​ ಗುಣ ವಿಶೇಷಗಳು.ಇಂತಹ ಅದ್ಭುತ ಕಲಾವಿದ ವಿಶ್ವ ಮಟ್ಟದಲ್ಲಿ ಹೆಸರು ಮಾಡುವ ಮುನ್ನವೇ ಇಹಲೋಕ ತ್ಯಜಿಸಿದ್ದು ಮಾತ್ರ ವಿಪರ್ಯಾಸ.

ಕನ್ನಡ ಚಿತ್ರಲೋಕದ ಹೆಮ್ಮೆಯ ಕಳಸದಂತಿದ್ದ ಸಂಚಾರಿ ವಿಜಯ್​ ಬೆರಳೆಣಿಕೆಯ ಚಿತ್ರಗಳ ಮೂಲಕವೇ ವಿಭಿನ್ನ ಛಾಪನ್ನು ಮೂಡಿಸಿದ್ದರು. ನಾನು ಅವನಲ್ಲ ಅವಳು ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಅವರಿಗೆ ಒಲಿದಿತ್ತು. ಇಂತಹ ನಟ ಬೈಕ್​ ಅಪಘಾತದಿಂದಾಗಿ ಅಪಾರ ಅಭಿಮಾನಿ ಬಳಗವನ್ನು ಅಗಲಿಬಿಟ್ರು. ಮರೆಯಲಾಗದ ಮಾಣಿಕ್ಯನ ಪ್ರತಿಮೆ ಇಂದು ಅವರ  ಹುಟ್ಟೂರಲ್ಲಿ ತಲೆ ಎತ್ತಿ ನಿಂತಿದೆ. ಅವರ ಸಾಧನೆಯ ಪ್ರತೀಕದಂತೆ ಸದಾ ಮಾದರಿಯಾಗಿ ದಾರಿದೀಪವಾಗಿ ನಿಲ್ಲಲಿದೆ.

ರಂಗಭೂಮಿಯ ಪ್ರತಿಭಾನ್ವಿತ ಕಲಾವಿದ ಸಂಚಾರಿ ವಿಜಯ್​, ಕಾಫಿ ಸೀಮೆ ಚಿಕ್ಕಮಗಳೂರಿನ ಪಂಚನಹಳ್ಳಿ ಗ್ರಾಮದಲ್ಲಿ ಜನಿಸಿದರು.  ಬದುಕಿನ ಸಂಚಾರ ಮುಗಿಸಿ ಮಣ್ಣಲ್ಲಿ ಮಣ್ಣಾದ ವಿಜಯ್​ ಸಾವಿಗೆ ಇಡೀ ಕರುನಾಡೇ ಕಂಬನಿ ಮಿಡಿದಿತ್ತು. ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ಪಂಚನಹಳ್ಳಿಯಲ್ಲಿ ಗೆಳೆಯ ರಘು ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಸ್ನೇಹಿತರು , ಕುಟುಂಬಸ್ಥರು, ಅಭಿಮಾನಿಗಳ ನಡುವೆ ಅಕ್ರಂದನ ಮುಗಿಲು ಮುಟ್ಟಿತ್ತು.

ಚಿಕ್ಕ ಹಳ್ಳಿಯಲ್ಲಿ ಜನಿಸಿ ಇಡೀ ಭಾರತವೇ ಗುರುತಿಸುವ ಮಟ್ಟಕ್ಕೆ ಬೆಳೆದ ಸಂಚಾರಿ ನಮ್ಮನ್ನು ಹಗಲಿ ಒಂದು ವರುಷವೇ ಕಳೆದಿದೆ. ಅವರ ಪುಣ್ಯತಿಥಿಯನ್ನು ಆಚರಿಸಿರುವ ಕುಟುಂಬಸ್ಥರು ಪಂಚನಹಳ್ಳಿಯಲ್ಲಿ ಪುಣ್ಯಸ್ಮರಣೆ ಕಾರ್ಯ ಮಾಡಿ ಪ್ರತಿಮೆ ಅನಾವರಣ ಮಾಡಿದ್ದಾರೆ. ವಿಜಯ್​ ಸಹೋದರರೇ ಈ ಪುತ್ಥಳಿ ನಿರ್ಮಾಣ ಮಾಡಿ ಅವರ ನೆನಪುಗಳನ್ನು ಶಾಶ್ವತವಾಗಿ ಉಳಿಸುವ ಕೆಲಸ ಮಾಡಿದ್ದಾರೆ. 30 ಕ್ಕು ಅಧಿಕ ಸಿನಿಮಾಗಳ ಸರದಾರನ ಸವಿನೆನಪಿನ ಪ್ರತೀಕವಾಗಿದೆ ಈ ಪ್ರತಿಮೆ.

ಹರಿವು, ನಾತಿಚರಾಮಿ, ನಾನು ಅವನಲ್ಲ ಅವಳು, ಚಿತ್ರಗಳಲ್ಲಿನ ಅವರ ಅಭಿನಯಕ್ಕೆ ಅವರೇ ಸಾಟಿ. ರಾಜ್ಯ, ರಾಷ್ಟ್ರ, ಫಿಲ್ಮ್​ಫೇರ್​ ಪ್ರಶಸ್ತಿ ಪಡೆದಿದ್ದ ಸಂಚಾರಿ ವಿಜಯ್​ ಪ್ರೇಕ್ಷಕರ ಮನದಲ್ಲಿ ಸದಾ ಹಚ್ಛ ಹಸಿರಂತೆ ಉಳಿದಿದ್ದಾರೆ. ಇಂತಹ ನಟ ನಮ್ಮೆನ್ನೆಲ್ಲಾ ಇಷ್ಟು ಬೇಗ ಅಗಲಿದರೂ ಅವರ ನೆನಪುಗಳು ಮಾತ್ರ ಅಜರಾಮರ. ರಿಯಲ್ಲಿ  ಮಿಸ್ ಯು ಸಂಚಾರಿ ವಿಜಯ್​.

ರಾಕೇಶ್​​ ಆರುಂಡಿ, ಫಿಲ್ಮ್ ಬ್ಯೂರೋ, ಪವರ್​ ಟಿವಿ

Exit mobile version