Site icon PowerTV

ನಟಿ ಸಾವಿಗೆ ಕಾರಣವಾದ ಶೆಟ್ಟಿಸ್ ಕಾಸ್ಮೆಟಿಕ್ ಸೆಂಟರ್​ಗೆ ನೋಟಿಸ್

ಬೆಂಗಳೂರು : ಕಿರುತೆರೆ ನಟಿ ಚೇತನಾ ರಾಜ್ ಸಾವು ಪ್ರಕರಣ ಸಂಬಂಧ ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್‌ಗೆ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಗೋಳೂರು ನೋಟಿಸ್ ನೀಡಿದ್ದು, ಕ್ಲಿನಿಕ್‌ನ ಮೂವರು ಸಿಬ್ಬಂದಿಗೆ ವಿಚಾರಣೆ ಒಂದು ದಿನದಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ.

ಅನುಮಾನಾಸ್ಪದವಾಗಿ ಮೃತಪಟ್ಟ ಕಿರುತೆರೆ ನಟಿ ಚೇತನಾ ರಾಜ್, ದೇಹದಲ್ಲಿದ್ದ ಕೊಬ್ಬಿನಾಂಶ ಕರಗಿಸಿಕೊಳ್ಳಲು ಈ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ‘ಮೇಲ್ನೋಟಕ್ಕೆ ಕಾನೂನಿನ ಉಲ್ಲಂಘನೆಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ದಿನದಲ್ಲಿ ಉತ್ತರ ನೀಡುವಂತೆ ಆದೇಶ  ನೀಡಲಾಗಿದೆ. ಒಂದುವೇಳೆ ಉತ್ತರ ನೀಡದಿದ್ದರೆ KPME ಕಾಯ್ದೆ ಪ್ರಕಾರ, ಕ್ರಮಕ್ಕೆ ಶಿಫಾರಸು ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಇನ್ನು ನವರಂಗ್ ಸಿಗ್ನಲ್​ನಲ್ಲಿರುವ ಕಾಸ್ಮೆಟಿಕ್ ಸೆಂಟರ್​ಗೆ ಅಂಟಿಸಿರುವ ನೋಟಿಸ್ ಅನ್ನು ಅಲ್ಲಿನ ಸಿಬ್ಬಂದಿ ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್ ಅನುಮತಿ ಪಡೆದಿರುವುದು ಪಾಲಿಕ್ಲಿನಿಕ್ ಮತ್ತು ಡಿಸ್ಪೆನ್ಸರಿಗೆ ಮಾತ್ರ. ಪಾಲಿಕ್ಲಿನಿಕ್​ನಲ್ಲಿ ಕೇವಲ ಎರಡು ಬೆಡ್​ಗೆ ಅವಕಾಶವಿದ್ದು, ಸಣ್ಣಪುಟ್ಟ ಸರ್ಜರಿ ಮಾಡಲು ಮಾತ್ರ ‌ಅನುಮತಿ ಇದೆ. ಲೈಪೊಸಕ್ಷನ್ ಸರ್ಜರಿಗೆ ಅನುಮತಿ ಪಡೆಯದ ಡಾ.‌ಶೆಟ್ಟಿ ಕ್ಲಿನಿಕ್​ನಲ್ಲಿ ಇಬ್ಬರೇ ವೈದ್ಯರಿದ್ದಾರೆ.

ಲೈಫೊಸಕ್ಷನ್ ಸರ್ಜರಿ ಮಾಡಲು ಆಪರೇಷನ್ ಥಿಯೇಟರ್, ಐಸಿಯು ಅರವಳಿಕೆ ತಜ್ಞರು ಇರಬೇಕು, ಆದರೆ, ಕಾಸ್ಮೆಟಿಕ್ ಸೆಂಟರ್​ನಲ್ಲಿ ಆಪರೇಷನ್ ಮಾಡಲು ಅನುಮತಿ ಇಲ್ಲ. ಪಾಲಿಕ್ಲಿನಿಕ್​ಗೆ ಅನುಮತಿ ಪಡೆದವರು ಮೇಜರ್ ಸರ್ಜರಿ ಮಾಡುವಂತಿಲ್ಲ. ಹೀಗಾಗಿ ಬೆಂಗಳೂರಿನ ಡಿ.ಹೆಚ್.ಓ ಶ್ರೀನಿವಾಸ್ ತಂಡದಿಂದ ಬೀಗ ಬಿದ್ದಿದೆ.

ಸದ್ಯ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version