Site icon PowerTV

ಅವ್ಯವಸ್ಥೆಗಳ ಆಗರ ಮೈಸೂರು ವಿವಿ ಮಹಿಳಾ ಹಾಸ್ಟೆಲ್

ಮೈಸೂರು: ಮೈಸೂರು ವಿವಿ ರಾಜ್ಯದಲ್ಲಿ ಶತಮಾನ ಕಂಡ ಹಳೆಯ ವಿವಿ. ಇಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಹೆಚ್‌ಡಿ ಮಾಡುತ್ತಿರುವ ವಿದ್ಯಾರ್ಥಿನಿಯರು ಗೋಳು ಕೇಳೋರಿಲ್ಲ. ಗಂಗೋತ್ರಿ ಕ್ಯಾಂಪಸ್‌ನ ಮಹಿಳಾ ಹಾಸ್ಟೆಲ್‌ ಮಳೆಯಿಂದ ಸಂಪೂರ್ಣ ಸೋರುತ್ತಿದೆ.ಮಳೆ ನೀರು ಚಾವಣಿಯಿಂದ ಸುರಿದು ರೂಂಗಳು ತುಂಬಿರುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಎದುರಾಗಿದೆ. ಸೀಲಿಂಗ್ ಹಾಗೂ ಗೋಡೆಗಳ ಮೇಲೆ ಸದಾ ನೀರು ಜಿನುಗಿ ಯಾವಾಗ ಕಟ್ಟಡ ತಮ್ಮ ಮೇಲೆ ಬೀಳುತ್ತೊ ಎನ್ನುವ ಭಯದಲ್ಲಿ ಇವರಲ್ಲಾ ಓದುತ್ತಿದ್ದಾರೆ.

ಇನ್ನು ಮಳೆ ನೀರು ಪ್ರತಿ ಗೋಡೆ ಒಳಗೊಂಡಂತೆ ಸೀಲಿಂಗ್ ಫ್ಯಾನ್‌ನಲ್ಲಿ ನೀರು ತುಂಬಿದ್ದು, ಆನ್ ಮಾಡಿದ್ರೆ ಸಾಕು ಶವರ್ ರೀತಿ ನೀರು ಬರುತ್ತೆ. ಇನ್ನು ಲೈಟ್ ಬಳಸಲು ಸ್ವಿಚ್ ಹಾಕಲು ಹೋದ್ರೆ ಶಾಕ್‌ ಹೊಡೆಯುತ್ತಿದೆ. ನೀರು ತುಂಬಿದ್ರಿಂದ ವಿದ್ಯಾರ್ಥಿನಿಯೊಬ್ಬರು ಬಿದ್ದು ಕೈ ಫ್ರ್ಯಾಕ್ಚರ್ ಮಾಡಿಕೊಂಡಿದ್ದಾರೆ. ಈ ಹಾಸ್ಟೆಲ್‌ನ ಎ ಬ್ಲಾಕ್ ನಲ್ಲಿ ಒಟ್ಟು 147 ರೂಂಗಳಿವೆ. ಪಿಜಿ ಹಾಗೂ ಪಿಹೆಚ್‌ಡಿ ಸೇರಿ ಒಟ್ಟು 474 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಎ ಬ್ಲಾಕ್‌ನ ಮೊದಲ ಮಹಡಿಯಲ್ಲಿರುವ ಬಹುತೇಕ ರೂಂಗಳು ಇದೇ ಪರಿಸ್ಥಿತಿ ಎದುರುಸುತ್ತಿದ್ದು, ಕುಲಪತಿ ಹೇಮಂತ್‌ಕುಮಾರ್ ಬಳಿ ಹೇಳಿಕೊಂಡರೆ ಅತ್ಯಂತ ಬೇಜವಾಬ್ದಾರಿ ಉತ್ತರ ಕೊಟ್ಟು ಕಳುಹಿಸಿದ್ದಾರಂತೆ.

ಒಟ್ಟಾರೆ ಮೇಲೆಲ್ಲಾ ತಳುಕು ಒಳಗೆ ಹುಳುಕು ಎನ್ನುವಂತಾಗಿದೆ ಮೈಸೂರು ವಿವಿ ಮಹಿಳಾ ಹಾಸ್ಟೆಲ್ ಕಥೆ. ಸಂಬಂಧಪಟ್ಟವರು ಹೆಣ್ಣು ಮಕ್ಕಳ ಸಮಸ್ಯೆ ಬಗೆಹರಿಸಬೇಕಿದೆ.

Exit mobile version