Site icon PowerTV

ಪಾಲಿಕೆ ಚುನಾವಣೆ ವಿರುದ್ಧ ಕಾನೂನು ಹೋರಾಟ

ಹುಬ್ಬಳ್ಳಿ : ವಾರ್ಡ್ ವಿಂಗಡಣೆ ಮಾಡಿದ್ದ ಸರಕಾರದ ತಿದ್ದುಪಡಿಗೆ ಸುಪ್ರಿಂ ಕೋರ್ಟ್ ತಡೆಯಜ್ಞೆ ನೀಡಿದ್ದರೂ ಸರ್ಕಾರ ಚುನಾವಣೆ ಮಾಡುವ ಮೂಲಕ ಕೋರ್ಟ್ ಆದೇಶ ಉಲ್ಲಂಘಿಸಿದ್ದು, ಇದೀಗ ಮೇಯರ್, ಉಪಮೇಯರ್ ಚುನಾವಣೆಗೆ ಮುಂದಾಗಿರುವುದರ ವಿರುದ್ಧ ಹೈಕೋರ್ಟ್ ಗೆ ಹೋಗಲಾಗುವುದು ಎಂದು ಪಾಲಿಕೆ ಮಾಜಿ ಸದಸ್ಯ ಕಿರಣ ಸಾಂಬ್ರಾಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಅವರು, ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್ ವಿಂಗಡಣೆ, ಮೀಸಲಾತಿ, ಜನಸಂಖ್ಯೆ ಅನುಗುಣವಾಗಿ ವಿಂಗಡಣೆ ಸೇರಿದಂತೆ ಹಲವು ನ್ಯೂನ್ಯತೆಗಳನ್ನು ಸರಕಾರ ಮಾಡಿದೆ. ಪ್ರಮುಖವಾಗಿ 2021 ರ ಚುನಾವಣೆಗೆ 2011 ರ ಜನಗಣತಿ ಪರಿಗಣಿಸಿರುವುದು ನಿಯಮ ಬಾಹಿರ. ಹೀಗಾಗಿ ಬೆಂಗಳೂರು ಹಾಗೂ ವಿಜಯಪುರ ಪಾಲಿಕೆ ಸುಪ್ರಿಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಸರಕಾರದ 3 ನೇ ತಿದ್ದುಪಡಿಗೆ ತಡೆಯಾಜ್ಞೆ ನೀಡಿದೆ. ಹೀಗಿರುವಾಗ ಬೆಳಗಾವಿ, ಕಲಬುರ್ಗಿ ಪಾಲಿಕೆ ಚುನಾವಣೆ ಮಾಡಿ ಸುಪ್ರಿಂ ಕೋರ್ಟ್ ತಡೆಯಾಜ್ಞೆ ಸಂಪುರ್ಣ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ಪಾಲಿಕೆ ಚುನಾವಣೆ ಕುರಿತಾದ 6 ರಿಟ್ ಅರ್ಜಿಗಳು ಹೈಕೋರ್ಟ್ ನಲ್ಲಿ ಬಾಕಿ ಉಳಿದಿವೆ. ಹೀಗಿದ್ದರೂ ಇಲ್ಲಿ ಚುನಾವಣೆ ಮಾಡಲಾಗಿದೆ. ಇದೀಗ ಮೇಯರ್, ಉಪಮೇಯರ್ ಚುನಾವಣೆ ನಡೆಸುವುದು ಕೋರ್ಟ್ ಆದೇಶ ಉಲ್ಲಂಘನೆಯಾಗುತ್ತಿದೆ. ಹೀಗಾಗಿ ಕೋರ್ಟ್ ರಜೆ ಮುಗಿಯುತ್ತಿದ್ದಂತೆ ಈಗಾಗಲೇ ಈ ಚುನಾವಣೆಗೆ ತಡೆಯಾಜ್ಞೆಗೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಕೈಗೆತ್ತಿ ಕೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಕಿರಣ ಸಾಂಬ್ರಾಣಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಪಾಲಿಕೆ ಸದಸ್ಯ ಅಲ್ತಾಫ್ ನವಾಜ್ ಕಿತ್ತೂರ, ಬಸವರಾಜ ಭಜಂತ್ರಿ ಸೇರಿದಂತೆ ಮುಂತಾದವರು ಉಪಸ್ಧಿತರಿದ್ದರು.

Exit mobile version