ಬೆಂಗಳೂರು: ಹೇಗೋ ಸಾಲಸೋಲ ಮಾಡಿ ಬಿಡಿಎ ನಿವೇಶನದಲ್ಲಿ ಮನೆ ಕಟ್ಟಿಕೊಂಡಿರ್ತಾರೆ. ಅಂತಹವರ ಮೇಲೂ ಬಿಡಿಎ ಅಧಿಕಾರಿಗಳು ಗಧಾ ಪ್ರಹಾರ ಮಾಡೋದನ್ನ ಇನ್ನೂ ಬಿಟ್ಟಿಲ್ಲ. ಮನೆ ಕಟ್ಟಿಕೊಂಡು ವಾರ್ಷಿಕ ಆಸ್ತಿ ತೆರಿಗೆ ಕಟ್ಟುತ್ತಿದ್ದಾರೆ. ಆದ್ರೂ ಲಂಚಬಾಕ ಬಿಡಿಎ ಅಧಿಕಾರಿಗಳ ಧನದಾಹ ದಣಿಯುತ್ತಿಲ್ಲ. ಈಗ ನಿರ್ವಹಣಾ ವೆಚ್ಚ ಅಂತಾ ಮನೆ ಮಾಲೀಕರ ಮೇಲೆ ತೆರಿಗೆ ಹೊರೆ ಹಾಕಿದ್ದಾರೆ. ಪ್ರತೀ ವರ್ಷ 1800 ರಿಂದ 5000 ಸಾವಿರ ರೂಪಾಯಿ ತನಕ ಪೀಕುತ್ತಿದ್ದಾರೆ. ಈ ರೀತಿಯ ಅಧಿಕಾರಿಗಳ ಕಳ್ಳಾಟಕ್ಕೆ ವಿಶ್ವೇಶ್ವರಯ್ಯ ಲೇಔಟ್ ನ ನಿವಾಸಿಗಳು ಬೇಸತ್ತು ಹೋಗಿ ಪವರ್ ಟಿವಿ ಬಳಿ ಗೋಳು ತೋಡಿಕೊಂಡ್ರು.
ವಿಶ್ವೇಶ್ವರಯ್ಯ ಲೇಔಟ್ ನಲ್ಲಿರೋ ನಿವಾಸಿಗಳ ಮೇಲೆ ಪ್ರಾಧಿಕಾರದ ದಂಡಪಿಂಡಗಳಿಗೆ ಯಾಕಿಷ್ಟು ಕೆಂಗಣ್ಣೋ ಗೊತ್ತಿಲ್ಲ. ಕೆಂಪೇಗೌಡ ಲೇಔಟ್, ಅಂಜನಾಪುರದಲ್ಲಿ ನಿರ್ವಹಣಾ ವೆಚ್ಚ ಕ್ಯಾನ್ಸಲ್ ಮಾಡಿದ್ದಾರೆ. ಆದ್ರೆ, ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ವಸೂಲಿ ಮಾಡ್ತಿದ್ದಾರೆ. ಈ ಬಗ್ಗೆ ಬಿಡಿಎ ಅಧ್ಯಕ್ಷರನ್ನ ಕೇಳಿದ್ರೆ, 2020ರಲ್ಲಿ ಬೋರ್ಡ್ ತೀರ್ಮಾನದಂತೆ ಮೇಂಟೆನೆನ್ಸ್ ಟ್ಯಾಕ್ಸ್ ಹಾಕಲಾಗ್ತಿದೆ. ಈ ಬಗ್ಗೆ ಆಯುಕ್ತರ ಬಳಿ ಚರ್ಚೆ ನಡೆಸಬೇಕು. ಮುಂದಿನ ಬೋರ್ಡ್ ಮೀಟಿಂಗ್‌ನಲ್ಲಿ ವಿಚಾರ ಪ್ರಸ್ತಾಪ ಮಾಡಿ ಕ್ರಮ ತೆಗೆದುಕೊಳ್ತೇವೆ ಎಂದರು.
ಇನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅನೇಕ ಲೇಔಟ್‌ಗಳಲ್ಲಿ ರಸ್ತೆ, ಫುಟ್ ಪಾತ್, ಪೈಪ್ ಲೈನ್, ಕರೆಂಟ್ ಯಾವುದೂ ಇಲ್ಲ. ಮೂಲಭೂತ ಸೌಕರ್ಯ ಹೆಸರಿನಲ್ಲಿ ನೂರಾರು ಕೋಟಿ ಗುಳುಂ ಮಾಡಿದ್ರೂ, ಕಿತ್ತು ತಿನ್ನೋದನ್ನು ಅಧಿಕಾರಿಗಳು ಇನ್ನೂ ಬಿಟ್ಟಿಲ್ಲ. ಬಿಡಿಎ ಅಧಿಕಾರಿಗಳು ಹೀಗೆ ಮಾಡಿದ್ರೆ, ಕರ ನಿರಾಕರಣೆ ಚಳವಳಿ ಮಾಡಬೇಕಾಗುತ್ತೆ ಅಂತಾ ನಿವಾಸಿಗಳು ಎಚ್ಚರಿಕೆ ಕೊಟ್ಟಿದ್ದಾರೆ.


