Site icon PowerTV

ಈಜಲು ಹೋಗಿ ಬಾಲಕನ ಸಾವು; ಘಟನೆ ಮುಚ್ಚಿಡಲು ಯತ್ನಿಸಿದ ಸ್ನೇಹಿತರು

ಆನೇಕಲ್: ಸ್ನೇಹಿತರೊಟ್ಟಿಗೆ ಈಜಲು ಹೋಗಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಆನೇಕಲ್​ ತಾಲೂಕಿನ ಅತ್ತಿಬೆಲೆ ಸಮೀಪ ಇರುವ ಬಳ್ಳೂರು ಗ್ರಾಮದ ಕೆರೆಯಲ್ಲಿ ನಡೆದಿದೆ.

ಅಭಿಷೇಕ್(13) ಮೃತಪಟ್ಟ ದುರ್ದೈವಿಯಾಗಿದ್ದು, ಅತ್ತಿಬೆಲೆ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ನಿನ್ನೆ ಸಂಜೆ ಏಳು ಜನ ಸ್ನೇಹಿತರ ಜೊತೆಗೂಡಿ ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಘಟನೆ ಸಂಭವಿಸಿದೆ.

ಇನ್ನು ಘಟನೆ ನಡೆಯುತ್ತಿದ್ದಂತೆ ಜೊತೆಯಲ್ಲಿದ್ದ ಸ್ನೇಹಿತರು ಭಯಗೊಂಡು ಯಾರಿಗೂ ತಿಳಿಸದೇ ಅವರವರ ಮನೆಗೆ ತೆರಳಿದ್ದಾರೆ.

ಬಾಲಕ ಪೋಷಕರು ರಾತ್ರಿ 10 ಗಂಟೆಯಾದ್ರು ಮಗ ಮನೆಗೆ ಬರದಿದ್ದಾಗ ಹುಡುಕಾಡಿದ್ದಾರೆ. ಎಲ್ಲಿಯೂ ಕಾಣದೇ ಇದ್ದಾಗ ಅತ್ತಿಬೆಲೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ಈಜಲು ಜೊತೆಯಲ್ಲಿ ಹೋಗಿದ್ದ ಸ್ನೇಹಿತರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ಬಾಲಕನ ಮೃತದೇಹ ಅಗ್ನಿಶಾಮಕದಳ ಸಿಬ್ಬಂದಿಗಳು ಹಾಗೂ ಸ್ಥಳೀಯರು ಕೆರೆಯಿಂದ ಹೊರತೆಗೆದಿದ್ದಾರೆ.
ಈ ಸಂಬಂಧ ಅತ್ತಿಬೆಲೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version