Site icon PowerTV

ರಾಷ್ಟ್ರಧ್ವಜ ಗಲಾಟೆ; ವಿಧಾನಸಭೆಯಲ್ಲಿ ಗದ್ದಲ ಗಲಾಟೆ ಕೋಲಾಹಲ!

ರಾಷ್ಟ್ರಧ್ವಜ ಗಲಾಟೆ.. 3ನೇ ದಿನವೂ ಕಲಾಪ ಬಲಿ!; ವಿಧಾನಸಭೆಯಲ್ಲಿ ಗದ್ದಲ ಗಲಾಟೆ ಕೋಲಾಹಲ!

ಯೆಸ್​.. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕೆಲ ದಿನಗಳ ಹಿಂದೆ ರಾಷ್ಟ್ರಧ್ವಜ ದ ಕುರಿತು ವಿವಾದಾತ್ಮಕ ಹೇಳಿಕೆಯೊಂದನ್ನು ಕೊಟ್ಟಿದ್ದರು.. ಅವಶ್ಯಕತೆ ಬಿದ್ರೆ ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವ ಸಂಧರ್ಭ ಬರಬಹುದು ಎಂದಿದ್ದರು.. ಈ ಹೇಳಿಕೆಯನ್ನು ರಾಷ್ಟ್ರ ದ್ರೋಹದ ಹೇಳಿಕೆ ಎಂದು ಪರಿಗಣಿಸಿ, ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಅಂತ ಆಗ್ರಹಿಸಿ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡಿಸಿತು‌.. ಪ್ರಶ್ನೋತ್ತರ ಅವಧಿ ಮುಗಿದ ಕೂಡಲೇ ನಿಲುವಳಿ ಸೂಚನೆ ಪ್ರಸ್ತಾವವನ್ನು ಮಂಡಿಸಿದ ಸಿದ್ದರಾಮಯ್ಯ, ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ರು.. ಸಂವಿಧಾನದ ಹುದ್ದೆಯಲ್ಲಿದ್ದವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.. ಇಂತವರು ಸಚಿವ ಸ್ಥಾನದಲ್ಲಿ ಮುಂದುವರೆಯಲು ನಾಲಾಯಕ್.. ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಿ, ರಾಷ್ಟ ದ್ರೋಹದ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದ್ರು.

ನಿಲುವಳಿ ಸೂಚನೆ ಮಂಡನೆಗೆ ಬಿಜೆಪಿ ಅಡ್ಡಿ..!; ಡಿಕೆಶಿ-ಈಶ್ವರಪ್ಪ ನಡುವೆ ಜಟಾಪಟಿ..!

ಇನ್ನೂ ಸಿದ್ದರಾಮಯ್ಯ ನಿಲುವಳಿ ಸೂಚನೆ ಬಗ್ಗೆ ಪ್ರಸ್ತಾಪ ಮಾಡುವಾಗಲೇ ಬಿಜೆಪಿ ಸದಸ್ಯರು ಅಡ್ಡಿ ಪಡಿಸುತ್ತಿದ್ದರು.. ಗೃಹ ಸಚಿವ ಆರಗ ಜ್ಞಾನೇಂದ್ರ, ಸಿ.ಟಿ.ರವಿ ಮತ್ತಿತರರು ಪದೇ ಪದೇ ಈಶ್ವರಪ್ಪ ಅವರನ್ನು ಸಮರ್ಥನೆ ಮಾಡಿಕೊಳ್ಳಲು ಮುಂದಾದ್ರು.. ಈ ವೇಳೆ ಸಿದ್ದರಾಮಯ್ಯ ಬೆಂಬಲಕ್ಕೆ ಡಿಕೆಶಿ ಎದ್ದು ನಿಂತರು.. ಈ ಹಂತದಲ್ಲಿ ಪರಸ್ಪರ ವೈಯಕ್ತಿಕ ವಾಗ್ದಾಳಿಗೆ ಸದನ ಸಾಕ್ಷಿಯಾಗಬೇಕಾಯಿತು.. ಜೈಲಿಗೆ ಹೋಗಿ ಬಂದಿದ್ದೀಯಾ, ಬೇಲ್ ಮೇಲೆ ಹೊರಗಿದ್ದೀಯಾ ಎಂದೆಲ್ಲಾ ಏಕವಚನದಲ್ಲೇ ಈಶ್ವರಪ್ಪ ವಾಗ್ದಾಳಿಗೆ ಮುಂದಾದರು.. ಈ ವೇಳೆ ಆಕ್ರೋಶಗೊಂಡ ಡಿ ಕೆ ಶಿವಕುಮಾರ್ ಈಶ್ವರಪ್ಪ ಜೊತೆ ಜಟಾಪಟಿಗೆ ಇಳಿದರು. ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವರಗೆ ವಾಗ್ವಾದ ನಡೆಯಿತು. ಯಾವಾಗ ಪರಿಸ್ಥಿತಿ ಕೈ ಮಿರುತ್ತಿದೆ ಅಂತ ತಿಳಿಯಿತು ಸ್ಪೀಕರ್ ಕಾಗೇರಿ ಸದನವನ್ನು ಮುಂದೂಡಿದ್ರು..

ಭೋಜನ ವಿರಾಮದ ಬಳಿಕ ಮುಂದುವರಿದ ಗದ್ದಲ..!; ಈಶ್ವರಪ್ಪ ರಾಜೀನಾಮೆಗೆ ಗಡುವು ಕೊಟ್ಟ ಕಾಂಗ್ರೆಸ್..!

ಭೋಜನ ವಿರಾಮದ ನಂತರ ಕಲಾಪ ಆರಂಭವಾಗುತಿದಂತೆ ಮತ್ತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದ್ರು.. ರಾಷ್ಟ್ರಧ್ವಜ ಹಿಡಿದುಕೊಂಡು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದ್ರು.. ಈ ವೇಳೆ ಕಾಂಗ್ರೆಸ್ ನಡೆಗೆ ಸಿಎಂ ಬೊಮ್ಮಾಯಿ ಮತ್ತು ಸ್ಪೀಕರ್ ಕಾಗೇರಿ ಅಸಮಾಧಾನ ಹೊರ ಹಾಕಿದ್ರು.. ಸಿದ್ದರಾಮಯ್ಯ ಮಂಡಿಸಿದ ನಿಲುವಳಿಯನ್ನು ತಿರಸ್ಕಾರ ಮಾಡಿದ್ರು.. ಯಾವಾಗ ಸ್ಪೀಕರ್ ನಿಲುವಳಿ ಅನರ್ಹ ಮಾಡಿದ್ರೊ, ಕಾಂಗ್ರೆಸ್ ಕಿಚ್ಚು ಹೆಚ್ಚಾಯಿತು..

ಮತ್ತೆ ಗದ್ದಲ ಗಲಾಟೆ ಜೋರಾದ ಕಾರಣ ಸದನವನ್ನು ಸ್ಪೀಕರ್ ಮುಂದೂಡಿದ್ರು.. ಕಾಂಗ್ರೆಸ್ ನಾಯಕರು ಗಡುವು ನೀಡುತ್ತಿದ್ದು, ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.. ಇಲ್ಲದೆ ಹೋದ್ರೆ ಅಹೋರಾತ್ರಿ ಧರಣಿ‌ ಮಾಡಲು‌ ಹಿಂದೆ ಸರಿಯಲ್ಲ ಅಂತ ಎಚ್ಚರಿಸಿದ್ರು..

ಒಟ್ಟಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಸದನದಲ್ಲಿ ನಡೆದುಕೊಂಡ ರೀತಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.. ಒಟ್ಟಾರೆ ಸಚಿವ ಈಶ್ವರಪ್ಪ ಹೇಳಿಕೆ ಮೇಲಿನ ಪರ ವಿರೋಧ ಹಗ್ಗಜಗ್ಗಾಟಕ್ಕೆ ಕಲಾಪದ ಸಮಯ ವ್ಯರ್ಥವಾಗಿದೆ.. ಮತ್ತೆ ಪ್ರತಿಭಟನೆ ಮತ್ತು ಧರಣಿ ನಡೆಸುವ ಎಚ್ಚರಿಕೆಯನ್ನು ಕಾಂಗ್ರೆಸ್ ‌ನೀಡಿದೆ.. ಹೀಗಾಗಿ ಉಭಯ ಸದನಗಳಲ್ಲಿ ಹೈಡ್ರಾಮಾ ನಡೆಯುವುದು ಗ್ಯಾರಂಟಿ..

– ಬಸವರಾಜ್ ಚರಂತಿಮಠ, ಪೊಲಿಟಿಕಲ್ ಬ್ಯೂರೋ, ಪವರ್ ಟಿವಿ

Exit mobile version