Site icon PowerTV

ಭ್ರಷ್ಟಾಚಾರವನ್ನು ಬೆತ್ತಲುಗೊಳಿಸುತ್ತೇನೆ: ವಿ.ಎಸ್.ಉಗ್ರಪ್ಪ

ಬೆಂಗಳೂರು: ಹೆಣ್ಣು ಕುಲಕ್ಕೆ ಎಂಎಲ್​ಸಿ ಸಿಎಂ ಇಬ್ರಾಹಿಂ ಅಪಮಾನ ಮಾಡಿದ್ದಾರೆಂದು ಮಾಜಿ ಸಂಸದ ವಿ ಎಸ್​ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ನಾನು ನಲ್ವತ್ತು ವರ್ಷದಿಂದ ವಕೀಲ ವೃತ್ತಿ ಮಾಡುತ್ತಿದ್ದೇನೆ. ಮಾನನಷ್ಟ ಮೊಕದ್ದಮೆ ಹೂಡಲಿ. ಅದನ್ನು ಎದುರಿಸುತ್ತೇನೆ ಎಂದರು.

ಅವರಿಗೆ ಸಿಬಿಐ ಕ್ಲೀನ್ ಚಿಟ್ ಯಾವುದರಲ್ಲಿ ಕೊಟ್ಟಿದೆ? ರೋಲೆಕ್ಸ್ ಪ್ರಕರಣವೇನಾಯ್ತು? ವಕ್ಫ್ ಬೋರ್ಡ್ ಆಸ್ತಿಯನ್ನು ಕಬಳಿಸಿಲ್ಲವಾ? ಆ ಜಾಗದಲ್ಲಿ ಕಟ್ಟಿರುವ ಮಳಿಗೆಗಳಿಂದ ಬರುವ ಬಾಡಿಗೆ ಪಡೆಯುತ್ತಿಲ್ಲವಾ? ಎಂದು ಪ್ರಶ್ನಿಸಿದರು. ಇವರು ಪರಿಷತ್​ನಲ್ಲಿ ಸದಸ್ಯರಾಗಿದ್ದಾರೆ. ಯಾವ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದ್ದಾರೆ ಅನ್ನೋದನ್ನು ಹೇಳಲಿ ನೋಡೋಣ ಎಂದು ಕಿಡಿ ಕಾರಿದರು.

ನಾನು ಅಕ್ರಮ ಗಣಿಗಾರಿಕೆ ಸಂಬಂಧ ವರದಿಯನ್ನು ಕೊಟ್ಟಿದ್ದೇನೆ. ಅಂಗನವಾಡಿಯ ಅಕ್ರಮದ ವರದಿಯನ್ನೂ ಕೊಟ್ಟಿದ್ದೇನೆ. ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಅವರು ಹಾಕುವ ಮಾನನಷ್ಟ ಮೊಕದ್ದಮೆಯನ್ನ ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದೇನೆ ಎಂದರು. ನನ್ನನ್ನು ಶ್ವಾನಕ್ಕೆ ಹೋಲಿಕೆ ಮಾಡಿದ್ದಾರೆ. ನಾಯಿಗೆ ಇರುವ ನಿಷ್ಠೆ ಇಬ್ರಾಹಿಂಗೆ ಇದೆಯಾ?. ಇವರ ಭ್ರಷ್ಟಾಚಾರವನ್ನು ಬೆತ್ತಲುಗೊಳಿಸುತ್ತೇನೆ. ಎಲ್ಲಿ ಬೇಕಾದರೂ ಆಹ್ವಾನ ನೀಡಲಿ. ಬಹಿರಂಗ ಚರ್ಚೆಗೆ ಸಿದ್ಧನಾಗಿದ್ದೇನೆ ಎಂದು ಸವಾಲು ಹಾಕಿದರು.

Exit mobile version