ಒಡಿಶಾ: ಇಂದು ಕಾಡಿನ ಪ್ರಮಾಣ ತೀರ ಕಡಿಮೆಯಾಗಿ ಕಾಡುಪ್ರಾಣಿಗಳು ಆಹಾರಕ್ಕಾಗಿ ನಾಡಿಗೆ ನುಗ್ಗುವುದು ಸಾಮಾನ್ಯವಾಗಿ ಹೋಗಿದೆ. ಹೀಗಾಗಿ ಮಾನವ ಪ್ರಾಣಿಗಳ ಸಂಘರ್ಷ ತಾರಕಕ್ಕೇರಿದೆ. ಮೂಕ ಕಾಡುಪ್ರಾಣಿಗಳ ರೋಧನೆಯನ್ನು ಮನುಷ್ಯ ಅರ್ಥಮಾಡಿಕೊಳ್ಳುವಲ್ಲಿ ವಿಫಲನಾಗಿದ್ದಾನೆ. ಕರಡಿಗಳೆರಡು ಆಹಾರಕ್ಕಾಗಿ ನಾಡಿಗೆ ನುಗ್ಗಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿರುವ ಘಟನೆ ಒಡಿಶಾದ ನಬ್ರಂಗ್ಪುರ ಜಿಲ್ಲೆಯ ಉಮರ್ ಕೋಟೆ ಬ್ಲಾಕ್‌ನ ಬುರ್ಜಾ ಗ್ರಾಮದಲ್ಲಿ ನಡೆದಿದೆ. ಕರಡಿಗಳು ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಬಂದಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ತಾಯಿ ಕರಡಿ ಹಾಗೂ ಅದರ ಮರಿ ಹಸಿವಿನಿಂದ ಆಹಾರ ಹುಡುಕಿಕೊಂಡು ಹಳ್ಳಿಯೆಡೆಗೆ ಬಂದಿರುವುದಾಗಿ ಶಂಕಿಸಲಾಗಿದೆ. ಕಾಡಿಗೆ ಬಹು ಸಮೀಪವಿರುವ ಬುರ್ಜಾ ಗ್ರಾಮಕ್ಕೆ ಕರಡಿಗಳು ನುಗ್ಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ನಂತರದಲ್ಲಿ ಗ್ರಾಮಸ್ಥರು ಬೆಂಕಿಯಿಂದ ಅವುಗಳನ್ನು ಹೆದರಿಸಿ ಸಮೀಪದ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.