Site icon PowerTV

ನಾನು ಜೀವಂತವಾಗಿ ಬದುಕಿ ಬಂದೆ : ಪಿಎಂ ಮೋದಿ

ಪಂಜಾಬ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭದ್ರತೆಯ ಉಲ್ಲಂಘನೆ ವಿಚಾರ ಕುರಿತ ತನಿಖೆಗೆ ಸುಪ್ರೀಂಕೋರ್ಟ್ ಮುಂದಾಗಿದೆ. ನಿವೃತ್ತ ನ್ಯಾಯಾಧೀಶರ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆ ನಡೆಸಲಿದೆ. ಇದೇ ವೇಳೆ ಸುಪ್ರೀಂಕೋರ್ಟ್ ಕೂಡ ಕೇಂದ್ರ ಮತ್ತು ಪಂಜಾಬ್ ಸರ್ಕಾರ ಘಟನೆ ಕುರಿತು ತನಿಖೆ ವಿಚಾರಣೆ ನಡೆಸದಂತೆ ತಿಳಿಸಿರುವುದು ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಸುಪ್ರೀಂಕೋರ್ಟ್‌ನಲ್ಲಿ ಪಿಎಂ ಭದ್ರತೆ ವೈಫಲ್ಯದ ಕುರಿತ ಪ್ರಕರಣದ ವಿಚಾರಣೆ ನಡೆಯಿತು. ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಹಿಮಾ ಕೊಹ್ಲಿ ಅವರ ಪೀಠವು ಹೊಸ ಸಮಿತಿಯ ಬಗ್ಗೆ ವಿವರವಾದ ಆದೇಶಗಳನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಹೇಳಿದೆ. ಆದೇಶದಲ್ಲಿ ಚಂಡೀಗಢ ಡಿಜಿಪಿ, ಎನ್ಐಎ ಐಜಿ, ರಿಜಿಸ್ಟ್ರಾರ್ ಜನರಲ್ ಮತ್ತು ಹೆಚ್ಚುವರಿ ಡಿಜಿ, ಗುಪ್ತಚರ ವಿಭಾಗ ಸಮಿತಿಯಲ್ಲಿ ಸೇರಿಸುವಂತೆ ನ್ಯಾಯಾಲಯ ಹೇಳಿದೆ. ಜೊತೆಗೆ ಕಳೆದ ಶುಕ್ರವಾರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪ್ರಧಾನಿಯವರ ಪ್ರಯಾಣದ ದಾಖಲೆಗಳನ್ನು ಸಂರಕ್ಷಿಸುವಂತೆ ಸೂಚಿಸಿತ್ತು.

ವಿಚಾರಣೆ ವೇಳೆ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪಂಜಾಬ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದು, ಸಂಪೂರ್ಣ ಗುಪ್ತಚರ ವೈಫಲ್ಯ ಆಗಿದೆ. ಜೊತೆಗೆ ಎಸ್ಪಿಜಿ ಕಾಯಿದೆಯ ಸ್ಪಷ್ಟ ಉಲ್ಲಂಘನೆ ಆಗಿದೆ. ಈ ಮಾರ್ಗದಲ್ಲಿ ಪ್ರತಿಭಟನಾಕಾರರು ಇದ್ದಾರೆ ಎಂಬ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿದಿದ್ದರೂ, ಪ್ರಧಾನಿಯವರ ಭದ್ರತೆಗೆ ಯಾವುದೇ ಮಾಹಿತಿ ನೀಡಿಲ್ಲ ಎಂದರು. ಇನ್ನು ಪಂಜಾಬ್ ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ಡಿಎಸ್ ಪಟ್ವಾಲಿಯಾ ಅವರು ಪ್ರಧಾನಿಯವರ ಪ್ರಯಾಣದ ವಿವರಗಳನ್ನು ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಅವರು ದಾಖಲಿಸಿದರು. ಇದೇ ವೇಳೆ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳಿಗೆ ಏಳು ಶೋಕಾಸ್ ನೋಟಿಸ್ಗಳನ್ನು ನೀಡಲಾಗಿದ್ದು, ಯಾವುದೇ ವಿಚಾರಣೆಯ ಅವಕಾಶವಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.

ಇದೇ ಜನವರಿ ಐದರಂದು ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಭಾರೀ ಲೋಪ ಉಂಟಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಆರೋಪಿಸಿತ್ತು. ದೇಶದ ಪ್ರಧಾನ ಮಂತ್ರಿಗಳು ಬರುತ್ತಾರೆ ಎಂದು ಗೊತ್ತಿದ್ದು, ಪಂಜಾಬ್ ಸರ್ಕಾರ ರಸ್ತೆ ಸಂಚಾರದಲ್ಲಿ ಸುರಕ್ಷತೆ ವಹಿಸಿಲ್ಲ. ಇದರಿಂದಾಗಿ ಫ್ಲೈ ಒವರ್ ಮೇಲೆ ಪ್ರಧಾನಿ ಅವರ ಕಾರು 15-20 ನಿಮಿಷ ಸಿಲುಕಿತು. ಜೊತೆಗೆ ಹೆಚ್ಚುವರಿ ಭದ್ರತೆ ನೀಡುವಲ್ಲಿ ಕೂಡ ವಿಫಲವಾಗಿತ್ತು. ಈ ಘಟನೆ ಬಳಿಕ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ನಾನು ಜೀವಂತವಾಗಿ ಬದುಕಿ ಬಂದೆ. ಪಂಜಾಬ್ ಸರ್ಕಾರಕ್ಕೆ ಧನ್ಯವಾದ ಹೇಳಿ ಎಂದು ಏರ್‌ಪೋರ್ಟ್‌ ಅಧಿಕಾರಿಗಳಿಗೆ ತಿಳಿಸಿದರು.

Exit mobile version