Site icon PowerTV

ಶಾಸಕರ ಪ್ರೇಮ್ ಕಹಾನಿಗೆ ಬಿಗ್ ಟ್ವಿಸ್ಟ್

ಕೊಪ್ಪಳ : ಕನಕಗಿರಿ ಶಾಸಕ ಮತ್ತು ಮಹಿಳಾ ಅಧಿಕಾರಿಯ ಆಡಿಯೋ ವೈರಲ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ನಿನ್ನೆಯಷ್ಟೇ ಮಹಿಳಾ ಅಧಿಕಾರಿ ಈ ಆಡಿಯೋ ನನಗೆ ಸಂಬಂಧಿಸಿದ್ದಲ್ಲ ಎಂದಿದ್ದರು. ಆದರೆ, ಮಹಿಳಾ ಅಧಿಕಾರಿಯ ಸಹೋದರ ವಿಡಿಯೋ ಹೇಳಿಕೆಯೊಂದು ಬಿಡುಗಡೆ ಮಾಡಿದ್ದು, ಶಾಸಕರ ಪ್ರೇಮ ಕಹಾನಿಗೆ ಮತ್ತೆ ಟ್ವಿಸ್ಟ್ ಸಿಕ್ಕಿದೆ.

ಕೊಪ್ಪಳ ಜಿಲ್ಲೆಯಷ್ಟೇ ಅಲ್ಲದೇ ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಕನಕಗಿರಿ ಶಾಸಕ ಬಸವರಾಜ ದಡೆಸುಗೂರು ಮತ್ತು ಮಹಿಳಾ ಅಧಿಕಾರಿ‌ಯ ಆಡಿಯೋ ಪ್ರಕರಣದಲ್ಲಿ ಇದೀಗ ಮತ್ತೊಬ್ಬರು ಎಂಟ್ರಿ ಆಗಿದ್ದಾರೆ. ಹೌದು, ಆಡಿಯೋ ವೈರಲ್ ಆದಾಗಿನಿಂದಲೂ ಮಹಿಳಾ ಅಧಿಕಾರಿ ಮಾತ್ರ, ಈ ಆಡಿಯೋಕ್ಕು ನನಗೂ ಸಂಬಂಧವೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಆದ್ರೆ, ಆ ಮಹಿಳಾ ಅಧಿಕಾರಿಯ ಸಹೋದರ ಸಂದೀಪ ಎಂಬುವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಶಾಸಕರು ತಮ್ಮ ಸಹೋದರಿಗೆ ಕಿರುಕುಳ ಕೊಟ್ಟಿದ್ದಾರೆ. ಅವರ ಮದುವೆ ವಿಚಾರದಲ್ಲಿ ಅಡ್ಡ ಬಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ಶಿವರಾಜ್ ತಂಗಡಗಿ ಕೂಡ ಪ್ರತಿಕ್ರಿಸಿದ್ದಾರೆ.ಯಾರಿಗೆ ಅನ್ಯಾಯವಾಗಿದೆಯೋ ಅವರು ನಮ್ಮ ಸಹಾಯ ಕೇಳಿದರೆ ಖಂಡಿತ ನ್ಯಾಯ ಕೊಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ ಎಂದಿದ್ದಾರೆ.ಅಲ್ಲದೆ ಈ ಘಟನೆ ಇಡೀ ಕನಕಗಿರಿ ಕ್ಷೇತ್ರಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನು, ಮಹಿಳಾ ಅಧಿಕಾರಿ ಸಹೋದರನ ವಿಡಿಯೋ ಬೆನ್ನಲ್ಲೇ ಶಾಸಕರ ಮತ್ತೊಂದು ಆಡಿಯೋ ವೈರಲ್ ಆಗಿದೆ. ಸಂದೀಪ್ ಮನವೊಲಿಸಲು ಶಾಸಕರು ಪ್ರಯತ್ನಪಟ್ಟಿದ್ದಾರೆ. ಆದರೆ, ದಡೇಸುಗೂರರ ಸತತ ಪ್ರಯತ್ನ ಸಂಪೂರ್ಣ ವಿಫಲವಾಗಿದೆ. ಮಹಿಳಾ ಅಧಿಕಾರಿ ಸಹೋದರ ಶಾಸಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಒಟ್ಟಾರೆ ಕೇಸರಿ ಶಾಸಕ ಮತ್ತು ಮಹಿಳಾ ಅಧಿಕಾರಿ‌ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ ಇಲ್ಲಿಗೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

Exit mobile version