Site icon PowerTV

ಪೋಸ್ಟರ್‌ನಲ್ಲಿ ನನ್ನ ಹೆಸರನ್ನು ಬಳಸಬೇಡಿ : ರಾಕೇಶ್ ಟಿಕಾಯತ್

ಮೀರತ್ : ಕೃಷಿ ಕಾನೂನು ವಿರೋಧಿಸಿ ಒಂದು ವರ್ಷದಿಂದ ನಡೆದ ರೈತರ ಆಂದೋಲನ ಅಂತ್ಯಗೊಂಡಿದೆ. ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಗಾಜಿಪುರ ಗಡಿಯಲ್ಲಿ ಮೊಕ್ಕಾಂ ಹೂಡಿದ್ದ ರೈತರು ಇದೀಗ ಮನೆಗೆ ಮರಳಿದ್ದಾರೆ. ನಿನ್ನೆ ಟಿಕಾಯತ್ ಫತಾಹ್ ಮೆರವಣಿಗೆ ನಡೆಸಿ ರೈತರೊಂದಿಗೆ ಮನೆಗೆ ಮರಳಿದರು. ಏತನ್ಮಧ್ಯೆ, ಯಾವುದೇ ರೀತಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಹೋಗುವುದಿಲ್ಲ ಎಂದು ಟಿಕಾಯತ್ ಹೇಳಿದ್ದಾರೆ. ದೆಹಲಿಯಿಂದ ಹಿಂದಿರುಗುವಾಗ, ಮೀರತ್‌ನಲ್ಲಿ ರೈತರು ನಿನ್ನೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಕೇಶ್ ಟಿಕಾಯತ್​​​ “ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಹೋಗುವುದಿಲ್ಲ ಮತ್ತು ಯಾವುದೇ ರಾಜಕೀಯ ಪಕ್ಷಗಳು ತಮ್ಮ ಪೋಸ್ಟರ್‌ಗಳಲ್ಲಿ ನನ್ನ ಹೆಸರು ಅಥವಾ ಫೋಟೋವನ್ನು ಬಳಸಬಾರದು” ಎಂದು ಹೇಳಿದ್ದಾರೆ.

ರೈತರ ಆಂದೋಲನವನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಡಿಸೆಂಬರ್ 9 ರಂದು ಒಂದು ವರ್ಷದ ಆಂದೋಲನವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು. ಕನಿಷ್ಠ ಬೆಂಬಲ ಬೆಲೆ (MSP) ಕುರಿತು ಸಮಿತಿಯನ್ನು ರಚಿಸುವುದಾಗಿ ಮತ್ತು ರೈತರ ವಿರುದ್ಧ ಹೂಡಿರುವ ಪ್ರಕರಣಗಳನ್ನು ಹಿಂಪಡೆಯುವುದಾಗಿ ಸರ್ಕಾರ ಭರವಸೆ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ದೆಹಲಿಯ ಗಡಿಯಲ್ಲಿರುವ ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿಯಲ್ಲಿ ರೈತರು ಮೂರು ಕೃಷಿ ಕಾನೂನುಗಳ ವಿರುದ್ಧ ಆಂದೋಲನವನ್ನು ಪ್ರಾರಂಭಿಸಿದ್ದರು ಮತ್ತು ಇತ್ತೀಚೆಗೆ ಕೇಂದ್ರ ಸರ್ಕಾರ ಈ ಕಾನೂನುಗಳನ್ನು ರದ್ದುಗೊಳಿಸಿತು, ನಂತರ ರೈತರು ಮನೆಗೆ ಮರಳಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ರೈತರು ಟ್ರ್ಯಾಕ್ಟರ್ ಮತ್ತು ಲಾರಿಗಳಲ್ಲಿ ತಮ್ಮ ಮನೆಗಳಿಗೆ ತೆರಳಿದರು.

ಸುದ್ದಿ ಸಂಸ್ಥೆ ಪಿಟಿಐ-ಭಾಷಾ ಪ್ರಕಾರ, ವಿಜಯ ಯಾತ್ರೆಯಲ್ಲಿ ತೊಡಗಿರುವ ರೈತರು ಹವನ ಪೂಜೆ ಮತ್ತು ಪ್ರಸಾದ ವಿತರಣೆಯ ನಂತರ ದೇಶಭಕ್ತಿ ಗೀತೆಗಳು ಮತ್ತು ಭಾರತ ಮಾತೆಯ ಘೋಷಣೆಗಳ ನಡುವೆ ಗಾಜಿಪುರ ಗಡಿಯಿಂದ ತಮ್ಮ ಗಮ್ಯಸ್ಥಾನಕ್ಕೆ ತೆರಳಿದರು. ಈ ಸಂದರ್ಭದಲ್ಲಿ ರೈತ ಮುಖಂಡ ಟಿಕಾಯತ್ ಮಾತನಾಡಿ, ಆಂದೋಲನ ಬಹಳಷ್ಟನ್ನು ಕಲಿಸಿದ್ದು, ಅದರ ಹುಳಿ, ಸಿಹಿ, ಕಹಿ ನೆನಪುಗಳು ಸದಾ ಇರುತ್ತವೆ ಎಂದರು.

Exit mobile version