ಬೆಂಗಳೂರು: ಬಿಡಿಎ ನ ಭ್ರಷ್ಟ ಅಧಿಕಾರಿಗಳನ್ನು ಮಟ್ಟ ಹಾಕಲು ಎಸಿಬಿ ಸಜ್ಜಾಗಿರುವುದು ಭ್ರಷ್ಟ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. 100 ಕ್ಕೂ ಹೆಚ್ಚು ಭ್ರಷ್ಟ ಬಿಡಿಎ ಅಧಿಕಾರಿಗಳ ಮೇಲೆ FIR ದಾಖಲಿಸಿ ವಿಚಾರಣೆಗೊಳಪಡಿಸಲು ಎಸಿಬಿ ನಿರ್ಧರಿಸಿದೆ. ಈ ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಸರ್ಕಾರಕ್ಕೆ ಎಸಿಬಿ ಅನುಮತಿ ಕೋರಿದೆ.
ಬಿಡಿಎ ನಲ್ಲಿ ಬೆಳೆದಿರುವ ಭ್ರಷ್ಟಾಚಾರವನ್ನು ಬೇರುಸಮೇತ ಕಿತ್ತುಹಾಕಲು ಎಸಿಬಿ ನಿರ್ಧರಿಸಿದಂತಿದೆ. ಆದ್ದರಿಂದಲೇ ಕಳೆದ ತಿಂಗಳು ಬಿಡಿಎ ಕೇಂದ್ರ ಕಛೇರಿ ಸೇರಿದಂತೆ 4 ವಿಭಾಗೀಯ ಕಛೇರಿಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು. ಆ ವೇಳೆ ಭಾರಿ ಪ್ರಮಾಣದ ಅಕ್ರಮಗಳು ಪತ್ತೆಯಾಗಿದ್ದವು. ದಾಳಿ ವೇಳೆ ಪತ್ತೆಯಾದ ದಾಖಲೆಗಳ ಪರಿಶೀಲನೆ ನಡೆಸಿದ ಎಸಿಬಿಗೆ ಅಲ್ಲಿ ಲೋಪಗಳು ಕಂಡುಬಂದಿರುವುದರಿಂದ, FIR ದಾಖಲಿಸಿ ವಿಚಾರಣೆ ನಡೆಸಲು ಎಸಿಬಿ ನಿರ್ಧರಿಸಿದೆ.
ಆದ್ದರಿಂದ ಅನುಮತಿ ನೀಡುವಂತೆ ಎಸಿಬಿ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಇದಕ್ಕೆ ಸರ್ಕಾರ ಅನುಮತಿ ನೀಡುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ 100 ಕ್ಕೂ ಹೆಚ್ಚು ಅಧಿಕಾರಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ. ಈ ಭ್ರಷ್ಟಾಚಾರದಲ್ಲಿ ಕೆ.ಎ.ಎಸ್ ಅಧಿಕಾರಿಗಳು, ಭೂಸ್ವಾಧೀನಾಧಿಕಾರಿಗಳು, ಮಧ್ಯವರ್ತಿಗಳು ಸೇರಿದ್ದಾರೆ. ಹಾಲಿ ಅಧಿಕಾರಿಗಳಷ್ಟೆ ಅಲ್ಲದೆ ಅಕ್ರಮ ನಡೆದಿರುವ ಅವಧಿಯಲ್ಲಿ ಯಾರೆಲ್ಲ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದರೋ ಅವರಿಗೆಲ್ಲ ಕಂಟಕ ಎದುರಾಗಲಿದೆ.


