Site icon PowerTV

ಕೊರೊನಾ ಆತಂಕದ ನಡುವೆಯೂ ಮಾದಪ್ಪನ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ

ಚಾಮರಾಜನಗರ : ಕಡೇ ಕಾರ್ತಿಕ ಸೋಮವಾರ ಹಿನ್ನೆಲೆಯಲ್ಲಿ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರ ದಂಡೇ ಹರಿದು ಬರುತ್ತಿದೆ.

ಈ ಬಾರಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ತೆಪ್ಪೋತ್ಸವಕ್ಕೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಹಾಗಾಗಿ, ತೆಪ್ಪೋತ್ಸವ ರದ್ದಾಗಿದೆ. ಉಳಿದಂತೆ ದೀಪದಗಿರಿ ಒಡ್ಡುವಿನಲ್ಲಿ ಮಹಾಜ್ಯೋತಿ ಬೆಳಗುವ ಕಾರ್ಯಕ್ರಮ ನಡೆಯಲಿದೆ.ಕಾರ್ತಿಕ ಮಾಸದ ಜಾತ್ರೆಗೆ ಬೆಟ್ಟಕ್ಕೆ ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪವಾಡ ಪುರುಷ ಮಹದೇಶ್ವರನ ದರ್ಶನ ಪಡೆಯುತ್ತಾರೆ.

ಕಳೆದ ವರ್ಷ ಜಾತ್ರೆ ಸರಳವಾಗಿ ನಡೆದಿತ್ತು. ದಸರಾ ಬಳಿಕ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಕಡೇ ಕಾರ್ತಿಕ ಸೋಮವಾರವಾದ ಇಂದು 30 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಕೆಎಸ್‌ಆರ್‌ಟಿಸಿ ಕೂಡ ಹೆಚ್ಚುವರಿಯಾಗಿ 100 ಬಸ್‌ಗಳ ಸೌಲಭ್ಯ ಒದಗಿಸಿದೆ.

ಕಾರ್ತಿಕ ವಿಶೇಷ ಪೂಜೆ ಹಾಗೂ ದೀಪೋತ್ಸವಕ್ಕಾಗಿ ಪ್ರಾಧಿಕಾರವು ವಿಶೇಷ ಸಿದ್ಧತೆಗಳನ್ನು ಮಾಡಿದೆ. ದೇವಾಲಯಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದ್ದು, ದೇವಾಲಯದ ಒಳಾವರಣದಲ್ಲಿ ಹೂವಿನ ಅಲಂಕಾರ ಮಾಡಲಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಪ್ರಸಾದ ವಿತರಣೆಗಾಗಿ 1.5 ಲಕ್ಷ ಲಾಡು ಸಿದ್ಧಪಡಿಸಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ಹೆಚ್ಚು ತಯಾರಿಸಲು ಪ್ರಾಧಿಕಾರದ ಸಿಬ್ಬಂದಿ ಸಜ್ಜುಗೊಂಡಿದ್ದಾರೆ. ಇಡೀ ದಿನ ದಾಸೋಹ ಇರಲಿದ್ದು, ತಿಂಡಿ ವ್ಯವಸ್ಥೆ ಮಾತ್ರ ಇರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಹದೇಶ್ವರರು ಬೆಟ್ಟದ ದೀಪದ ಗಿರಿ ಒಡ್ಡಿನಲ್ಲಿ ಬಂದು ಐಕ್ಯವಾಗಲು ಸ್ಥಳವನ್ನು ಹುಡುಕುತ್ತಾರೆ. ಬೆಟ್ಟಗುಡ್ಡಗಳೆಲ್ಲವೂ ಕತ್ತಲುಮಯವಾಗಿದ್ದರಿಂದ ಒಡ್ಡಿನಲ್ಲಿ ತಮ್ಮ ಪವಾಡದಿಂದ ಜ್ಯೋತಿ ಬೆಳಗಿಸುತ್ತಾರೆ. ಈ ಜ್ಯೋತಿಯೇ ಮುಂದೆ ಬೆಟ್ಟದಲ್ಲಿನ ಗ್ರಾಮಸ್ಥರ ಮನೆ ಮನೆಗಳಲ್ಲಿ ಪ್ರಕಾಶಿಸುವಂತಾಗುತ್ತದೆ. ದೀಪಾವಳಿ ಮುಗಿದ ಬಳಿಕ ಬರುವಂತಹ ನಾಲ್ಕು ಕಾರ್ತಿಕ ಸೋಮವಾರಗಳಂದು ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮಾಡಿ ಕೊನೆಯ ಕಾರ್ತಿಕ ಸೋಮವಾರದಂದು ದೀಪದಗಿರಿ ಒಡ್ಡಿನಲ್ಲಿ ಮಹಾಜ್ಯೋತಿ ಬೆಳಗಿಸಲಾಗುತ್ತದೆ. ಈ ಜ್ಯೋತಿಯನ್ನು ಕಂಡು ಸ್ವಾಮಿಯ ಆಶೀರ್ವಾದ ಪಡೆದರೆ ತಮ್ಮೆಲ್ಲ ಕಷ್ಟಗಳು ಬೆಂಕಿಯಂತೆ ಉರಿದುಹೋಗುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ.

Exit mobile version