Site icon PowerTV

‘ನಿಗಮ ಮಂಡಳಿ ಸ್ಥಾನ ಸಿಗದಿರೋದಕ್ಕೆ ಕಣ್ಣೀರು ಹಾಕಿದ ಬಿಜೆಪಿ ಮಾಜಿ ಶಾಸಕ’

ಕಲಬುರಗಿ/ಚಿತ್ತಾಪುರ : ಬಿಎಸ್‌ವೈ ನೇತೃತ್ವದ ಸರ್ಕಾರದಲ್ಲಿ ಯಾವುದಾದರೊಂದು ನಿಗಮ ಮಂಡಳಿ ಸ್ಥಾನ ಸಿಗುತ್ತೆಂಬ ಭರವಸೆ ಹೊಂದಿದ್ದ ಮಾಜಿ ಶಾಸಕ ವಾಲ್ಮೀಕಿ ನಾಯಕ್‌ಗೆ ಮಂಡಳಿ ಸ್ಥಾನ ನೀಡದೇ ಇರೋದ್ರಿಂದ ಕಣ್ಣೀರು ಹಾಕಿದ್ದಾರೆ.

ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಸುದ್ದಿಗೋಷ್ಟಿ ಕರೆದಿದ್ದ, ವೇಳೆ ವಾಲ್ಮೀಕಿ ನಾಯಕ್, ಪಕ್ಷಕ್ಕಾಗಿ ಮೂರು ದಶಕಗಳ ಕಾಲ ಪ್ರಾಮಾಣಿಕವಾಗಿ ದುಡಿದಿದ್ದು, ನನ್ನ ಸೇವೆಯನ್ನ ಪರಿಗಣಿಸಿ ನಿಗಮ ಮಂಡಳಿಗಳಿಗೆ ನೇಮಿಸಿದರೆ, ಖರ್ಗೆ ಕ್ಷೇತ್ರದಲ್ಲಿ ಪಕ್ಷ ಬಲಿಷ್ಟಗೊಳಿಸಲು ಸಹಾಯಕವಾಗುತ್ತದೆ..  ಆದರೆ ನನ್ನ ನಿಷ್ಟೆಗೆ ಪಕ್ಷದ ವರಿಷ್ಟರು ಬೆಲೆ ಕೊಡದೇ ನನ್ನನ್ನ ಕಡೆಗಣಿಸಿದ್ದಾರೆಂದು ನೊಂದು ಕಣ್ಣೀರು ಹಾಕಿದರು.

ಅಂದಹಾಗೇ 2009 ರಲ್ಲಿ ಚಿತ್ತಾಪುರದ ಶಾಸಕರಾಗಿದ್ದ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ, ಶಾಸಕ ಸ್ಥಾನದಿಂದ ಲೋಕಸಭೆಗೆ ಸ್ಪರ್ಧಿಸಿ ಜಯಶೀಲರಾಗಿದ್ದರು. ಆಗ ಚಿತ್ತಾಪುರ ಕ್ಷೇತ್ರಕ್ಕೆ ಮರು ಚುನಾವಣೆ ನಡೆದಾಗ ವಾಲ್ಮೀಕಿ ನಾಯಕ್ ಸ್ಪರ್ಧಿಸಿ ಗೆದ್ದಿದ್ದರು. ಅದಾದ ನಂತರ ಪಕ್ಷದ ಏಳಿಗೆಗೆ ಹಗಲಿರುಳು ಶ್ರಮಿಸಿದ ವಾಲ್ಮೀಕಿ ನಾಯಕ್‌ ಪಕ್ಷದಲ್ಲಿ ತುಳಿತ್ತಕ್ಕೊಳಗಾಗುತ್ತ ಬಂದರು. ಆದರು ಸಹ ಪಕ್ಷದ ತತ್ವ ಸಿದ್ದಾಂತಗಳಿಗೆ ತಲೆಬಾಗಿ ಪಕ್ಷ ಸಂಘಟನೆ ಮಾಡುತ್ತ ಬಂದಿದ್ದರು. ನನ್ನದು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವನಲ್ಲ. ನನಗೆ ಗಾಡ್ ಫಾದರ್ ಅಂತ ಯಾರೂ ಇಲ್ಲ. ನನಗೆ ಪಕ್ಷವೇ ಗಾಡ್ ಫಾದರ್. ಬಿಎಸ್ ಯಡಿಯಡಿಯೂರಪ್ಪನವರೇ ನನಗೆ ನಾಯಕರು. ಪಕ್ಷದ ಆದೇಶದ ಮೇರೆಗೆ ರೈಲು ರೋಖೋ ಚಳುವಳಿ ರಸ್ತೆ ತಡೆ ಸೇರಿದಂತೆ ಹಲವಾರು ಹೋರಾಟ ಮಾಡಿದ್ದೇನೆ. ಪಕ್ಷಕ್ಕಾಗಿ ಲಾಟಿ ಏಟು ತಿಂದಿದ್ದೇನೆ. ಜೈಲಿಗೂ ಹೋಗಿದ್ದೇನೆ ಎಂದರು.  ನನ್ನ ಕಣ ಕಣದಲ್ಲು ಬಿಜೆಪಿ ರಕ್ತ ಹರಿಯುತ್ತಿದ್ದು, ಸ್ಥಾನಮಾನ ಕೊಡಲಿ ಬಿಡಲಿ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಅಂತಾ ವಾಲ್ಮೀಕಿ ನಾಯಕ್ ಘೋಷಿಸಿದರು.

Exit mobile version