ಶಿವಮೊಗ್ಗ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ವಿಚಾರವೊಂದು ಚರ್ಚೆಯಾಗಲಿದೆ ಎಂದು ಹೇಳುವ ಮೂಲಕ ಸಚಿವ ಕೆ.ಎಸ್. ಈಶ್ವರಪ್ಪ ಕುತೂಹಲ ಮೂಡಿಸಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿಯ ವಿಶೇಷ ಸಭೆ ನಡೆಯುತ್ತಿದೆ ಎಂಬ ಸುದ್ದಿಗಳು ಬಂದಾಗಲಿಂದಲೂ ಇದರ ಜೊತೆ ಜೊತೆಗೆ ಸಭೆಯಲ್ಲಿ ಒಂದು ಮಹತ್ವದ ತೀರ್ಮಾನ ಆಗುತ್ತದೆ ಎಂಬ ಸುಳಿವನ್ನು ಬಿಜೆಪಿ ಪಕ್ಷದ ನಾಯಕರೇ ತಿಳಿಸುತ್ತಾ ಬಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಹಲವು ಹೊಸ ವಿಷಯಗಳು ಜನರಲ್ಲಿ ಚರ್ಚೆಯಾಗುತ್ತಿವೆ. ಬಹುಶಃ ಈಗ ಸುದ್ದಿಯಲ್ಲಿರುವುದು ನಾಯಕತ್ವದ ಬದಲಾವಣೆ ವಿಚಾರ. ಸಿಎಂ ಬದಲಾವಣೆ ವಿಚಾರ ಈ ಹಿಂದೆಯೇ ಪ್ರಸ್ತಾಪಕ್ಕೆ ಬಂದಿದೆ.
ಬೆಳಗಾವಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ ವಿಷಯ ಅಪ್ರತ್ಯಕ್ಷವಾಗಿ ಬಂದಿದ್ದರೂ ಕೂಡ, ಗೋಹತ್ಯೆ ನಿಷೇಧ ಕುರಿತು ಪ್ರಮುಖವಾಗಿ ಚರ್ಚೆ ನಡೆದಿತ್ತು. ಆ ಕಾಯ್ದೆ ಸದನದಲ್ಲಿ ಈಗಾಗಲೇ, ಜಾರಿಯಾಗಿದೆ. ಅಂತೆಯೇ, ಲವ್ ಜಿಹಾದ್ ಸಂಬಂಧಿಸಿದಂತೆ, ಈ ವಿಶೇಷ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ, ಕೃಷಿ ಕಾಯ್ದೆಗಳ ಉದ್ದೇಶಗಳನ್ನು ಜನರಿಗೆ ತಲುಪಿಸುವ ಬಗ್ಗೆಯೂ ಮುಖಂಡರು ಮಾತನಾಡಲಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಯುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭಾಗಿಯಾಗುವ ಕಾರಣ ಈ ಸಭೆ ಮತ್ತಷ್ಟು ಸತ್ವ ಪರೀಕ್ಷೆಗೆ ಗುರಿಯಾಗಲಿದೆ. ಸಭೆಯಲ್ಲಿ ನಾಯಕತ್ವ ವಿಷಯ ಚರ್ಚೆಯಾಗುವ ಸುಳಿವರಿತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಾನೇ ಮುಖ್ಯಮಂತ್ರಿಯಾಗಿ ಅಧಿಕಾರ ಪೂರ್ಣಗೊಳಿಸುತ್ತೇನೆ ಎಂದು ಸಂದೇಶ ಕೂಡ ರವಾನಿಸಿದ್ದಾರೆ.


