Site icon PowerTV

 ಕಾಲಿಗೆ ಪಾದರಕ್ಷೆ ಧರಿಸದೇ ಪಾದರಕ್ಷೆಯೊಂದಿಗೆ ಮತಯಾಚನೆ: ನವೀನ್

ಚಿಕ್ಕಮಗಳೂರು: ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ಹರಕೆ ಹೊತ್ತು ಬರಿಗಾಲಲ್ಲೇ ಏಕಾಂಗಿಯಾಗಿ ಮತಯಾಚನೆ ಮಾಡುವ ಮೂಲಕ ಕಾಫಿನಾಡಲ್ಲಿ ಗ್ರಾಮ ಪಂಚಾಯಿತಿ ಅಭ್ಯರ್ಥಿಯೊಬ್ಬ ಗಮನಸೆಳೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿ ಚುನಾವಣಾ ಅಭ್ಯರ್ಥಿ ನವೀನ್ ಹಾವಳಿಯ ಪ್ರಚಾರದ ವೈಖರಿ ಎಲ್ಲರ ಗಮನ ಸೆಳೆದಿದೆ. ಅರೆಕೊಡಿಗೆ ಸಮೀಪದ ಸುಕ್ಲುಮಕ್ಕಿಯ ನವೀನ್ ಹಾವಳಿ ಅವರು ನಿಡುವಾಳೆ ಕ್ಷೇತ್ರದಲ್ಲಿ ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂರು ತಿಂಗಳ ಮೊದಲೇ ಮಂಗಳೂರಿನ ದೇವಸ್ಥಾನವೊಂದರಲ್ಲಿ ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ಹರಕೆ ಹೊತ್ತಿದ್ದು, ಬರಿಗಾಲಿನಲ್ಲಿ ಏಕಾಂಗಿಯಾಗಿ ಮತಯಾಚನೆ ಮಾಡುತ್ತಿದ್ದಾರೆ.

ಚಪ್ಪಲಿ ಚಿಹ್ನೆಯನ್ನೇ ಚುನಾವಣೆಗೆ ಆರಿಸಿಕೊಂಡಿದ್ದು, ಅಲ್ಲದೇ ಚಿಕ್ಕ ಚಪ್ಪಲಿಯನ್ನು ತನ್ನ ಬ್ಯಾಗಿಗೆ ಸಿಕ್ಕಿಸಿಕೊಂಡು ಮನೆಮನೆಗೆ ತೆರಳಿ ಚಪ್ಪಲಿ ಗುರುತಿಗೆ ಮತ ನೀಡುವಂತೆ ಮತಯಾಚಿಸುತ್ತಿದ್ದಾರೆ. ಮತಯಾಚನೆ ಮಾಡುವಾಗ ಬೆಂಬಲಿಗರನ್ನು ಕರೆದುಕೊಂಡು ಹೋಗದೇ ಏಕಾಂಗಿಯಾಗಿ ಮತಯಾಚನೆ ಮಾಡುತ್ತಿದ್ದಾರೆ. ಮತಯಾಚನೆ ಮಾಡಲು ಹೋಗುವ ಪ್ರತಿ ಮನೆಯಿಂದ ಒಂದು ಹಿಡಿ ಅಕ್ಕಿಯನ್ನು ಪಡೆಯುತ್ತಿದ್ದು, ಆ ಅಕ್ಕಿಯಿಂದಲ್ಲೇ ಅನ್ನ ಮಾಡಿಕೊಂಡು ಸೇವಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಡಿಸೆಂಬರ್ 22ರಂದು ಒಂದೇ ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ.

Exit mobile version