Site icon PowerTV

ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವು..!

ಚಿಕ್ಕಮಗಳೂರು:  ಪತಿಯ ಸಾವಿನ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಹೆಂಡತಿಯೂ ಸಾವನ್ನಪ್ಪಿರೋ ಅಪರೂಪದ ಘಟನೆ ತಾಲೂಕಿನ ಕಳಸಾಪುರ ಸಮೀಪದ ಗಾಳಿಹಳ್ಳಿ ಗ್ರಾಮದಲ್ಲಿ ನಡೆದಿದೆ. 84 ವರ್ಷದ ದೊಡ್ಡ ರಾಜಣ್ಣ ಹಾಗೂ 74 ವರ್ಷದ ರುದ್ರಮ್ಮ ಮೃತ ದುರ್ದೈವಿಗಳು.

ಮೃತ ದೊಡ್ಡ ರಾಜಣ್ಣರಿಗೆ ಕಳೆದ ಎರಡ್ಮೂರು ವರ್ಷಗಳಿಂದ ಆರೋಗ್ಯ ಸರಿ ಇರಲಿಲ್ಲ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಕೂಡ ಆರೋಗ್ಯ ಸರಿ ಇಲ್ಲದ ಕಾರಣ ಆಸ್ಪತ್ರೆಗೆ ಕರೆತಂದಿದ್ದರು. ಆಸ್ಪತ್ರೆಗೆ ಕರೆತಂದಾಗ ಅವರನ್ನ ಪರೀಕ್ಷಿಸಿದ ವೈದ್ಯರು ಸಾವನ್ನಪ್ಪಿದ್ದಾರೆಂಬುದ ಸ್ಪಷ್ಟಪಡಿಸಿದ್ದಾರೆ. ಕೂಡಲೇ ಸಾವಿನ ವಿಚಾರವನ್ನ ಮನೆಯವರಿಗೆ ತಿಳಿಸಿದ್ದಾರೆ. ಪತಿ ತೀರಿಕೊಂಡರೆಂಬ ವಿಷಯ ತಿಳಿದ ರುದ್ರಮ್ಮ ಕೂಡ ನೋವಿನಿಂದ ಗೋಳಿಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದೊಂದು ವಾರದಿಂದ ಮೃತ ರುದ್ರಮ್ಮ ಕೂಡ ಪಾಶ್ರ್ವವಾಯುವಿನಿಂದ ಬಳಲುತ್ತಿದ್ದರು. ನಿನ್ನೆ ಗಂಡನ ಸಾವಿನ ಸುದ್ದಿ ಕೇಳಿ ಅವರೂ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಹೋಗಿದ್ದ ಪತಿಯ ಮೃತದೇಹ ಮನೆಗೆ ಬರುವ ಮುಂಚೆಯೇ ಪತ್ನಿ ಕೂಡ ಸಾವನ್ನಪ್ಪಿರೋದ್ರಿಂದ ಕುಟುಂಬಸ್ಥರಲ್ಲಿ ನೋವು ಮಡುಗಟ್ಟಿದೆ. ಇಬ್ಬರ ಅಂತ್ಯಕ್ರಿಯೆಯನ್ನ ಒಟ್ಟಿಗೆ ನಡೆಸಲು ಕುಟುಂಬಸ್ಥರ ಸಿದ್ಧತೆ ನಡೆಸಿದ್ದಾರೆ. 60 ವರ್ಷಗಳ ಕಾಲ ಸುದೀರ್ಘ ದಾಂಪತ್ಯ ಜೀವನ ನಡೆಸಿದ ಪತಿ-ಪತ್ನಿ ಇಬ್ಬರೂ ಸಾವಿನಲ್ಲೂ ಒಂದಾಗಿದ್ದಾರೆ.

Exit mobile version