Site icon PowerTV

ವಿಎಸ್‍ಐಎಲ್ ಘಟಕದಿಂದ ನಗರದ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ! – ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಭದ್ರಾವತಿಯ ವಿಎಸ್‍ಐಎಲ್ ಆಕ್ಸಿಜನ್ ತಯಾರಿಕಾ ಘಟಕದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದ್ದಾರೆ.

ಇಂದು ಭದ್ರಾವತಿಯ ವಿಎಸ್‍ಐಎಲ್ ಆಕ್ಸಿಜನ್ ತಯಾರಕಾ ಘಟಕಕ್ಕೆ ಭೇಟಿ ನೀಡಿ ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ್ರು. ವಿಎಸ್‍ಐಎಲ್‍ನಲ್ಲಿ ಸ್ಥಳೀಯ ಬಳಕೆಗಾಗಿ ಆಕ್ಸಿಜನ್ ಉತ್ಪಾದಿಸಲಾಗುತ್ತಿದೆ. ಸದ್ಯ ವೈದ್ಯಕೀಯ ಬಳಕೆಗೆ ಸೂಕ್ತವಾದ ಆಕ್ಸಿಜನ್ ಇಲ್ಲಿ ಉತ್ಪಾದಿಸಲಾಗುತ್ತಿದ್ದು,  ನಗರದ ಆಸ್ಪತ್ರೆಗಳಿಗೆ ಇಲ್ಲಿಂದ ಆಕ್ಸಿಜನ್ ಪೂರೈಕೆ ಮಾಡಲು ಸರ್ಕಾರದಿಂದ ಪರವಾನಿಗೆ ಒದಗಿಸಲಾಗುವುದು. ನಗರದ ಆಸ್ಪತ್ರೆಗಳ ಶೇ.30ರಷ್ಟು ಆಕ್ಸಿಜನ್ ಬೇಡಿಕೆಯನ್ನು ಈ ಒಂದೇ ಘಟಕದಿಂದ ಪೂರೈಕೆ ಮಾಡಲು ಸಾಧ್ಯವಿದೆ ಎಂದು ಅವರು ಹೇಳಿದ್ರು.

ಇನ್ನು ಜಿಲ್ಲೆಯ ಆಸ್ಪತ್ರೆಗಳಿಗೆ ಅಗತ್ಯವಿರುವ ಆಕ್ಸಿಜನ್ ಲಭ್ಯವಿರುವ ಕಡೆಗಳಿಂದ ತರಿಸಲು ಕ್ರಮ ಕೈಗೊಳ್ಳಲಾಗಿದೆ. ಆಕ್ಸಿಜನ್ ಸಾಗಾಟ ಮಾಡಲು ಟ್ಯಾಂಕರ್​ಗಳ ಕೊರತೆ ಕಂಡು ಬಂದಿದ್ದು, ಉನ್ನತ ಮಟ್ಟದಲ್ಲಿ ಸಮಾಲೋಚನೆ ನಡೆಸಿ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು. ವಿಎಸ್‍ಐಎಲ್ ಘಟಕದಲ್ಲಿ 300 ಗ್ಯಾಸ್ ಸಿಲಿಂಡರ್​ಗಳು ಸಹ ಲಭ್ಯವಿದ್ದು, ಇದನ್ನು ಸಹ ಜಿಲ್ಲೆಯ ಉಪಯೋಗಕ್ಕಾಗಿ ಬಳಸಿಕೊಳ್ಳಲಾಗುವುದು. ಇಲ್ಲಿ ಆಕ್ಸಿಜನ್ ಅನಿಲ ರೂಪದಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದು, ಅದನ್ನು ದ್ರವ ರೂಪಕ್ಕೆ ರೂಪಾಂತರ ಮಾಡುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಲು ಸೂಚಿಸಿದ್ರು.

ಜಿಲ್ಲೆಯಲ್ಲಿ ಯಾವುದೇ ಕರೋನಾ ಪಾಸಿಟಿವ್ ವ್ಯಕ್ತಿಗಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಕುರಿತು ಯಾವುದೇ ದೂರು ಬಂದಿಲ್ಲ. ಆದರೆ ಕರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಮೂಲಗಳಿಂದ ಆಕ್ಸಿಜನ್ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ರು.

ಈ ವೇಳೆ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ವಿಎಸ್‍ಐಎಲ್ ಘಟಕದ ಹಿರಿಯ ಅಧಿಕಾರಿಗಳು, ಖಾಸಗಿ ಪೂರೈಕೆದಾರರು ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version