Site icon PowerTV

ಕನ್ನಡಿಗ ಕೆ.ಎಲ್ ರಾಹುಲ್ ಕಾಯಂ ವಿಕೆಟ್ ಕೀಪರ್ ..?

ಕನ್ನಡಿಗ ಕೆ.ಎಲ್ ರಾಹುಲ್ ಇನ್ಮುಂದೆ ಟೀಮ್ ಇಂಡಿಯಾದ ಕಾಯಂ ವಿಕೆಟ್ ಕೀಪರ್ ಆಗಿ ಜವಬ್ದಾರಿ ನಿಭಾಯಿಸೋ ಸಾಧ್ಯತೆ ಹೆಚ್ಚಿದೆ. ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ನಂತರ ಟೀಮ್ ಇಂಡಿಯಾದ ಖಾಯಂ ವಿಕೆಟ್ ಕೀಪರ್ ಆಗಿ ಯಾರು ಮುಂದುವರೆಯಲಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ.  ಆ ಪ್ರಶ್ನೆ, ಚರ್ಚೆಗೆ ಉತ್ತರವಾಗಿ ಕನ್ನಡಿಗ ಕೆ.ಎಲ್ ರಾಹುಲ್ ಹೆಸರು ಬಲವಾಗಿ ಕೇಳಿ ಬರುತ್ತಿದೆ.

ಇಂಗ್ಲೆಂಡ್​ನಲ್ಲಿ ನಡೆದ 2019ರ ಏಕದಿನ ವರ್ಲ್ಡ್​ಕಪ್ ವೇಳೆಯಲ್ಲೇ ಧೋನಿ ನಂತರದ ಕಾಯಂ ವಿಕೆಟ್ ಕೀಪರ್ ಅಂತ  ರಿಷಭ್ ಪಂತ್ ಅವರಿಗೆ ಮಣೆ ಹಾಕಲಾಯಿತು. ಆದರೆ, ರಿಷಭ್ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವಿದ್ದಾರೆ. ಬ್ಯಾಟಿಂಗ್​​​ನಲ್ಲಂತೂ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ.  ಹೀಗಾಗಿ ನಾಯಕ ವಿರಾಟ್ ಕೊಹ್ಲಿ, ತಂಡದ ಮ್ಯಾನೇಜ್ಮೆಂಟ್ ಚಿತ್ತ ಕೂಡ ಕೆ.ಎಲ್ ರಾಹುಲ್ ಅವರತ್ತ ವಾಲಿದೆ ಎನ್ನಲಾಗಿದೆ.

ರಾಹುಲ್ ಕೂಡ  ಈಗಾಗಲೇ ವಿಕೆಟ್​ ಕೀಪರ್, ಬ್ಯಾಟ್ಸ್​ಮನ್ ಆಗಿ ತನ್ನ ಸಾಮರ್ಥ್ಯವನ್ನು ಪ್ರೂವ್ ಮಾಡಿದ್ದಾರೆ.  ರಾಹುಲ್​ ಬ್ಯಾಟಿಂಗ್​ನಲ್ಲಿ ಯಾವ್ದೇ ಕ್ರಮಾಂಕದಲ್ಲೂ ಬ್ಯಾಟ್​ ಬೀಸಲು ಸೈ… ವಿಕೆಟ್ ಕೀಪಿಂಗ್​ಗೂ ಸೈ… ಆದ್ದರಿಂದ ರಿಷಭ್ ಪಂತ್​ಗಿಂತ ರಾಹುಲ್ ಕಡೆಯೇ ಒಲವಿದೆ.

ರಾಹುಲ್ ತಂಡದ ಕಾಯಂ ವಿಕೆಟ್ ಕೀಪರ್ ಆದಲ್ಲಿ, ಬ್ಯಾಟಿಂಗ್ ಕ್ರಮಾಂಕದಲ್ಲಿ ಸಂದರ್ಭಕ್ಕೆ ತಕ್ಕ ಬದಲಾವಣೆ ತರಲು ಸಾಧ್ಯವಾಗುತ್ತದೆ. ಅಲ್ಲದೆ ಒಬ್ಬ ಬ್ಯಾಟ್ಸ್​ಮನ್ ಅಥವಾ ಆಲ್​ರೌಂಡರನ್ನು ತಂಡಕ್ಕೆ ಕೂಡಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಕ್ರಿಕೆಟ್ ಪಂಡಿತರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಟೀಮ್ ಇಂಡಿಯಾದ ಮಾಜಿ ವಿಕೆಟ್​ ಕೀಪರ್​, ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್, ಮಾಜಿ ವಿಕೆಟ್ ಕೀಪರ್ ನಯನ್ ಮೋಂಗಿಯಾ ಮತ್ತೊಬ್ಬ ಮಾಜಿ ವಿಕೆಟ್ ಕೀಪರ್ ದೀಪದಾಸ್​ ಗುಪ್ತಾ ಕೂಡ ರಾಹುಲ್​ ಗೆ ಕೀಪಿಂಗ್ ಚಾನ್ಸ್ ಕೊಡೋದು ಒಳ್ಳೇದು ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ ಒಡಿಐನಲ್ಲಿ ನನ್ನ ಮೊದಲ ಆಯ್ಕೆ ಕೆ.ಎಲ್ ರಾಹುಲ್. ಸ್ಟಂಪ್ಸ್ ಹಿಂದಿನ ಅವರ ನಿರ್ವಹಣೆ ಕೆಟ್ಟದಾಗಿಲ್ಲ. ಅವರು ವಿಕೆಟ್ ಕೀಪಿಂಗ್ ಆರಂಭಿಸಿದ್ರೆ ಬ್ಯಾಟಿಂಗ್​ನಲ್ಲಿ ಮತ್ತಷ್ಟು ಸುಧಾರಣೆ ಕಾಣಲು ಸಾಧ್ಯ. ಸದ್ಯ ಒಳ್ಳೆಯ ಫಾರ್ಮ್​ನಲ್ಲಿರುವ ಅವರೇ ಕೀಪಿಂಗ್​ಗೆ ಸೂಕ್ತ’’ ಅಂತ ನಯನ್ ಮೋಂಗಿಯಾ ಅಭಿಪ್ರಾಯ ಪಟ್ಟಿದ್ದಾರೆ.

ನಯನ್ ಮೋಂಗಿಯಾ ಮಾತನ್ನು ಒಪ್ಪಿರುವ ದೀಪದಾಸ್ ಗುಪ್ತಾ, ರಾಹುಲ್ ಮತ್ತು ಪಂತ್ ಅವರನ್ನು ಫಾರ್ಮೆಟ್​ಗೆ ತಕ್ಕಂತೆ ಬಳಸಿಕೊಳ್ಳಬಹುದು ಅನ್ನೋ ಸಲಹೆ ನೀಡಿದ್ದಾರೆ. ಕೀಪಿಂಗ್ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟರೆ ಖಂಡಿತಾ ರಾಹುಲ್ ಜಯಿಸ್ತಾರೆ ಎಂದು ಎಂಎಸ್​ಕೆ ಪ್ರಸಾದ್  ಭವಿಷ್ಯ ನುಡಿದಿದ್ದಾರೆ.

ಟೆಸ್ಟ್ ಕ್ರಿಕೆಟ್​ನಲ್ಲಿ ವೃದ್ಧಿಮಾನ್ ಸಹಾ ಕೀಪರ್ ಆಗಿ ಮುಂದುವರೆಯುದು ಬಹುತೇಕ ಖಚಿತ. ಒಡಿಐ,  ಟಿ20ಯಲ್ಲಿ ರಾಹುಲ್ , ಪಂತ್ ಮಾತ್ರವಲ್ಲದೆ ಅನುಭವಿ ಆಟಗಾರ ದಿನೇಶ್ ಕಾರ್ತಿಕ್, ಯುವ ಆಟಗಾರ ಸಂಜು ಸ್ಯಾಮ್ಸನ್ ಕೂಡ ರೇಸಲ್ಲಿದ್ದಾರೆ.

Exit mobile version