ಕೋಲಾರ : ಕೊರೋನಾ ಆತಂಕದ ಮಧ್ಯೆಯೂ, ಟೀಕೆ ಆಕ್ಷೇಪಣೆ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ, ಫಲಿತಾಂಶ ನಿರ್ವಿಘ್ನವಾಗಿ ಪ್ರಕಟವಾದ ಹಿನ್ನೆಲೆ ಕೋಲಾರದ ಕುರುಡುಮಲೆ ಗಣಪನ ದರ್ಶನ ಪಡೆದು ಸಚಿವ ಸುರೇಶ್ ಕುಮಾರ್ ಹರಿಕೆ ತಿರಿಸಿದ್ದಾರೆ. ಇದೀಗ ಮನಸ್ಸು ನಿರಾಳವಾಯಿತು, ಕುರುಡುಮಲೆ ವಿನಾಯಕನ ಮಂದಿರಕ್ಕೆ ಹೋಗಿ ಭಗವಂತನಿಗೆ ಶರಣಾದೆ ಅಂತಾ ಹೇಳಿಕೊಂಡರು.
ಮಹಾಮಾರಿ ಕೊರೊನಾ ಸೋಂಕಿನ ಮಧ್ಯೆ ಹಠ ತೊಟ್ಟವರಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಿಸಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಇವತ್ತು ಫಲಿತಾಂಶವನ್ನೂ ಖುದ್ದು ಅವರೇ ಪ್ರಕಟಿಸಿ ಸಮಾಧಾನದ ನಿಟ್ಟುಸಿರು ಬಿಟ್ಟರು. ಶಿಕ್ಷಣ ಸಚಿವರಾಗಿ ಸುರೇಶ್ ಕುಮಾರ್ ಪಟ್ಟ ಶ್ರಮಕ್ಕೆ ಎಲ್ಲೆಡೆಯಿಂದ ಇದೀಗ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಯಾವೊಬ್ಬ ವಿದ್ಯಾರ್ಥಿಯೂ ಆತಂಕ ಎದುರಿಸದೇ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನ ಸುಸೂತ್ರವಾಗಿ ನಡೆಸಪ್ಪಾ ಅಂತಾ ಸಚಿವ ಸುರೇಶ್ ಕುಮಾರ್ ಅವ್ರು ಕೋಲಾರದ ಮುಳಬಾಗಿಲಿನ ಕುರುಡುಮಲೆ ಗಣಪನಿಗೆ ಹರಿಕೆ ಹೊತ್ತಿದ್ದರು. ಸಚಿವರು ಇವತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಿ, ಭುಜದ ಮೇಲಿನ ಭಾರ ಇಳಿದಂತವರಾಗಿ, ಕೋಲಾರ ಜಿಲ್ಲೆಯ ಮುಳಬಾಗಿಲು ಕಡೆಗೆ ಬಂದಿದ್ದಾರೆ. ಇಲ್ಲಿನ ಇತಿಹಾಸ ಪ್ರಸಿದ್ದ ಕುರುಡುಮಲೆ ಗಣೇಶ ದೇಗುಲಕ್ಕೆ ದಂಪತಿ ಸಮೇತ ಆಗಮಿಸಿ ಹರಿಕೆ ತೀರಿಸಿದ್ದಾರೆ. ದೇವರಿಗೆ ಕೈಮುಗಿಯುತ್ತಾ ವಿಘ್ನ ನಿವಾರಕ ವಿನಾಯಕ ಏನಪ್ಪಾ ನಿನ್ನ ಲೀಲೆ, ಎಂತೆಂಥಾ ಸಂಕಷ್ಟಗಳು ಎದುರಾದವು. ಅದನ್ನೆಲ್ಲ ಹೂ ಎತ್ತಿ ಪಕ್ಕಕ್ಕಿಟ್ಟಷ್ಟು ಸಲೀಸಾಗಿ ದೂರ ಮಾಡಿಬಿಟ್ಟೆಯಲ್ಲಪ್ಪಾ, ನಿಜಕ್ಕೂ ನೀನು ಗ್ರೇಟ್ ಎಂದು ಗಣಪನಿಗೆ ಸಾಷ್ಟಾಂಗ ನಮಸ್ಕಾರವನ್ನ ಪೋಷಕರು, ಶಿಕ್ಷಕರ ಪರವಾಗಿ ಹಾಕಿದರು. ಬಹು ನಿರೀಕ್ಷಿತ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಯಿತು. ನನ್ನ ಮನಸ್ಸು ನಿರಾಳವಾಯಿತು. ಕುರುಡುಮಲೆ ವಿನಾಯಕ ಮಂದಿರಕ್ಕೆ ಬಂದು ಭಗವಂತನಿಗೆ ಶರಣಾದೆ ಎಂದು ದೇವಸ್ಥಾನದ ಬಳಿ ಸಚಿವ ಸುರೇಶ್ ಕುಮಾರ್ ಹೇಳಿದರು. ಆಗ ಪಕ್ಕದಲ್ಲೇ ಇದ್ದ ಅವರ ಪತ್ನಿಯ ಕಣ್ಣಂಚಿನಲ್ಲಿ ಧನ್ಯತಾ ಭಾವ ಮಿಂಚಾಗಿ ಹೊಳೆಯುತ್ತಿತ್ತು.