Site icon PowerTV

ಮಲೆನಾಡಿನಲ್ಲಿ ವರುಣನಾರ್ಭಟ – ಭೂಕುಸಿತದಿಂದಾಗಿ ಬಿರುಕು ಬಿಟ್ಟ ಮನೆಗಳು

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಅರಳಗೋಡು ಗ್ರಾಮದ ಮೇಲೆ ಅದ್ಯಾರಾ ವಕ್ರ ದೃಷ್ಟಿ ಬಿದ್ದಿದಿಯೋ ಗೊತ್ತಿಲ್ಲ. ಒಂದಲ್ಲ ಒಂದು ನಡೆಯಬಾರದ ಘಟನೆಗಳು ನಡೆದು, ಈ ಗ್ರಾಮದ ಜನರು ಹೈರಾಣಾಗಿ ಹೋಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಮಂಗನ ಖಾಯಿಲೆ ಭೀತಿಯಿಂದ ನರಳುತ್ತಿರುವ ಜನರಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬಾರಿಯ ಮಳೆಯ ಬಿರುಸಿಗೆ ಧರೆಯೇ ಕುಸಿದು ಹೋಗಿದೆ.

ಇಲ್ಲಿನ ನಂದೋಡಿ ಮತ್ತು ಆರೋಡಿ ಗ್ರಾಮದಲ್ಲಿ ಧರೆಯೇ ಕುಸಿದು ಹೋಗಿದ್ದು, ಇಡೀ ಗ್ರಾಮದ ಜನರು ಆತಂಕದಲ್ಲಿದ್ದಾರೆ. ಗ್ರಾಮದಲ್ಲಿರುವ 18 ಎಕರೆ ಜಾಗದಲ್ಲಿರುವ ಅನೇಕ ಮನೆಗಳು ಬಿರುಕು ಬಿಟ್ಟಿದ್ದು, ತೋಟ, ಗದ್ದೆಗಳು, ಸುಮಾರು ನಾಲ್ಕು ಅಡಿಗೂ ಹೆಚ್ಚು ಎತ್ತರಕ್ಕೆ ಬಂದು ಬಿಟ್ಟಿದೆ. ಇಷ್ಟೇ ಅಲ್ಲದೇ, ಇಲ್ಲಿರುವ ಗುಡ್ಡಗಳೇ ಕುಸಿದು ಬಿದ್ದಿದ್ದು, ಅಕ್ಷರಶಃ ಇಲ್ಲಿನ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ. ಕಳೆದ ವರ್ಷದ ನೆರೆ ಸಂದರ್ಭದಲ್ಲಿಯೂ ಈ ಗ್ರಾಮದ ಕೆಲವಾರು ಮನೆಗಳು ಬಿರುಕು ಬಿಟ್ಟಿತ್ತು. ಆದರೆ ಈ ಬಾರಿ ಇದಕ್ಕಿಂತಲೂ ಪರಿಸ್ಥಿತಿ ಭೀಕರವಾಗಿದೆ. ಮನೆಗಳ ಗೋಡೆಗಳು ಮನೆಯ ಮೇಲ್ಛಾವಣಿಯಿಂದ ಸರಿದು, ನೆಲ ಬಿರುಕು ಬಿಟ್ಟಿದ್ದು, ಮಕ್ಕಳು, ವೃದ್ಧರು ಸೇರಿದಂತೆ, ಪ್ರತಿಯೊಬ್ಬರು, ಯಾವಾಗ ಏನಾಗುತ್ತೋ ಎಂಬ ಭಯ, ಆತಂಕದಲ್ಲಿ ದಿನ ದೂಡುವಂತಾಗಿದೆ.

ಅಂದಹಾಗೆ, ಈ ಭೂಕುಸಿತಕ್ಕೆ, ಅರಣ್ಯ ಇಲಾಖೆಯೇ ಕಾರಣ ಎಂದು ಹೇಳಲಾಗುತ್ತಿದ್ದು,ಅರಣ್ಯ ಇಲಾಖೆಯ ಅಧಿಕಾರಿಗಳು ಅವೈಜ್ಞಾನಿಕವಾಗಿ ಎಲ್ಲಿ ಬೇಕೆಂದರಲ್ಲಿ ಇಂಗುಗುಂಡಿ ತೆಗೆದಿರುವುದೇ ಇದಕ್ಕೆ ಕಾರಣ ಎಂಬದು  ಗ್ರಾಮಸ್ಥರ ಆರೋಪವಾಗಿದೆ.

ಒಟ್ಟಾರೆ, ಈ ಬಾರಿಯ ಆಶ್ಲೇಷ ಮಳೆ, ಮಲೆನಾಡಿನ ಜನರನ್ನು ಆತಂಕಕ್ಕೆ ದೂಡಿದೆ, ಒಂದು ಕಡೆ ಶರಾವತಿ ಹಿನ್ನೀರು, ಮತ್ತೊಂದು ಕಡೆ ಅರಣ್ಯ ಇಲಾಖೆ ತೆಗೆದಿರುವ ಇಂಗುಗುಂಡಿಗಳ ಪರಿಣಾಮವೇ ಈ ಭೂಕುಸಿತಕ್ಕೆ ಕಾರಣವಾಗಿದ್ದು, ಜಿಲ್ಲಾಡಳಿತ ಈ ಕೂಡಲೇ, ತಂತ್ರಜ್ಱರನ್ನು ಕರೆಸಿ, ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ವೈಜ್ಞಾನಿಕವಾಗಿ ಇದಕ್ಕೆ ಕಾರಣವೇನು ಎಂಬುದು ತಿಳಿಸುವ ಮೂಲಕ ಗ್ರಾಮಸ್ಥರ ಆತಂಕ ನಿವಾರಿಸಬೇಕಿದೆ.

Exit mobile version