Site icon PowerTV

ಅಪಾಯ ಮಟ್ಟ ತಲುಪುತ್ತಿದೆ ಕರಾವಳಿಯ ಜೀವನದಿಗಳು..!

ದಕ್ಷಿಣ ಕನ್ನಡ : ಕಳೆದ ನಾಲ್ಕು ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳು ಅಪಾಯ ಮಟ್ಟವನ್ನ ತಲುಪಿವೆ. ಜಿಲ್ಲೆಯಲ್ಲಿ ಇಂದು ಮಳೆ ಪ್ರಮಾಣ ಇಳಿಮುಖವಾಗಿದ್ದರೂ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯ ಜೀವನದಿ ಎನಿಸಿದ ನೇತ್ರಾವತಿ ಸಹಿತ ಕುಮಾರಧಾರಾ, ಗುಂಡ್ಯ ಹೊಳೆಗಳಲ್ಲಿ ನೀರಿನ‌ ಪ್ರಮಾಣ ಹೆಚ್ಚಾಗಿದ್ದು, ನದಿ ತೀರ ಪ್ರದೇಶಗಳಲ್ಲಿ ಅಪಾಯದ ಮುನ್ಸೂಚನೆ ನೀಡಿದೆ.‌ ಬಂಟ್ವಾಳದಲ್ಲಿ ನೇತ್ರಾವತಿ 7.6 ಮೀಟರ್ (ಅಪಾಯದ ಮಟ್ಟ 8.5 ಮೀ.), ಉಪ್ಪಿನಂಗಡಿಯಲ್ಲಿ ನೇತ್ರಾವತಿ 29 ಮೀಟರ್ (ಅಪಾಯದ ಮಟ್ಟ 31.5 ಮೀಟರ್), ಉಪ್ಪಿನಂಗಡಿಯಲ್ಲಿ ಕುಮಾರಧಾರಾ 24 ಮೀಟರ್ (ಅಪಾಯದ ಮಟ್ಟ 26.5 ಮೀ.) ಎತ್ತರದಲ್ಲಿ ಹರಿಯುತ್ತಿದ್ದರೆ, ಗುಂಡ್ಯ ಹೊಳೆ 4.7 ಮೀಟರ್ (ಅಪಾಯದ ಮಟ್ಟ 5 ಮೀಟರ್) ದಾಖಲಾಗಿದ್ದು, ಇನ್ನೂ ಎರಡು‌ ದಿನಗಳ ಕಾಲ ಮಳೆ ಮುಂದುವರಿದಲ್ಲಿ ನದಿ ತಟದ ನಿವಾಸಿಗಳನ್ನ ಸ್ಥಳಾಂತರಿಸುವ ಅನಿವಾರ್ಯತೆ ಎದುರಾಗಲಿದೆ. ಇನ್ನು ನೀರಕಟ್ಟೆಯ ಸಾಗರ್ ಡ್ಯಾಂನಲ್ಲಿ 34 ಮೀಟರ್​ನಷ್ಟು ನೀರು ಸಂಗ್ರಹವಿದ್ದು (ಗರಿಷ್ಠ 38 ಮೀಟರ್), ಕಡಬದ ದಿಶಾ ಡ್ಯಾಂನಲ್ಲಿ 4.7 ಮೀಟರ್ (ಗರಿಷ್ಠ 5 ಮೀಟರ್) ಇದ್ದರೆ, ಶಂಭೂರಿನ ಎಎಂಆರ್ ಡ್ಯಾಂನಲ್ಲಿ 18.9 ಮೀಟರ್ (ಗರಿಷ್ಠ 18.9 ಮೀ.) ದಾಖಲಾಗಿದೆ.‌
ಶಂಭೂರು ಡ್ಯಾಂನ 8 ಗೇಟ್​ಗಳಲ್ಲಿ ಶೇ.50ರಷ್ಟು ಹಾಗೂ 1 ಗೇಟ್ ಅನ್ನು ಶೇ.40ರಷ್ಟು ತೆರೆಯಲಾಗಿದೆ. ಇನ್ನು ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ಡ್ಯಾಂನಲ್ಲಿ 6.4 ಮೀಟರ್ (ಅಪಾಯ ಮಟ್ಟ 7ಮೀ.) ನೀರು ಸಂಗ್ರಹವಿದ್ದು, ಇಲ್ಲಿರುವ ಎಲ್ಲ ಗೇಟ್​ಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಆಗಸ್ಟ್ 9ರ ವರೆಗೆ ಆರೆಂಜ್ ಅಲರ್ಟ್ ಇದ್ದು ಮಳೆ ಮುಂದುವರಿದಲ್ಲಿ ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಪ್ರವಾಹ ಭೀತಿ ಎದುರಾಗಲಿದೆ.

ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು

Exit mobile version