ಬೆಂಗಳೂರು : ನಗರದಲ್ಲಿ ಕೊರೊನಾ ದಿನೇ ದಿನೇ ಏರಿಕೆಯಾಗುತ್ತಲೇ ಇದೆ.ಇನ್ನೊಂದೆಡೆ ಆಗಸ್ಟ್ ಹಾಗೂ ಸೆಪ್ಟೆಂಬರ್ ನಲ್ಲಿ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೊರೋನಾ ತಡೆಗೆ ಹೆಚ್ಚುವರಿ ಸಿಬ್ಬಂದಿ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನು ಸೇವೆಗೆ ನಿಯೋಜಿಸಿಕೊಳ್ಳಲು ಪಾಲಿಕೆ ಮುಂದಾಗಿದೆ.
ಈ ಸಂಬಂಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಆದೇಶಿಸಿರುವ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಜಯನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ಪ್ಯಾರಾ ಮೆಡಿಕಲ್ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿರುವ 994 ವಿದ್ಯಾರ್ಥಿಗಳನ್ನು ಕೋವಿಡ್ ನಿಯಂತ್ರಣ ಕಾರ್ಯಕ್ಕೆ ವಿವಿ ಕುಲಸಚಿವರು ನಿಯೋಜನೆ ಮಾಡುವಂತೆ ಹಾಗೂ ಎಲ್ಲ ವಿದ್ಯಾರ್ಥಿಗಳು ನಾಳೆಯ ಒಳಗಾಗಿ ಬಿಬಿಎಂಪಿ ಉಪ ಆಯುಕ್ತರ (ಆಡಳಿತ) ಬಳಿ ತಪ್ಪದೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
