Site icon PowerTV

ಜೋಳದ ಹೊಲಕ್ಕೆ ವಿದ್ಯುತ್ ಬೇಲಿ, ಕಾಡಾನೆ ಸಾವು

ಚಿಕ್ಕಮಗಳೂರು: ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಜೋಳದ ಹೊಲಕ್ಕೆ ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮೃತ ಕಾಡಾನೆಯು ಸುಮಾರು 20 ವರ್ಷದ್ದು ಎಂದು ಗುರುತಿಸಲಾಗಿದೆ. ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದ ಹುಲಿಯಪ್ಪ ಎಂಬುವರ ಜಮೀನಿನಲ್ಲಿ ಆನೆ ಸಾವನ್ನಪ್ಪಿದೆ. ಜೋಳದ ಬೆಳೆಗೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿದ ಪರಿಣಾಮ ಕರೆಂಟ್ ಶಾಕ್ ನಿಂದ ಆನೆ ಮೃತ ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಹುಲಿಯಪ್ಪ ಜೋಳದ ಹೊಲಕ್ಕೆ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿದ್ದರಿಂದ ಆನೆ ಸಾವನ್ನಪ್ಪಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೀಗ, ಹುಲಿಯಪ್ಪ ಕೂಡ ನಾಪತ್ತೆಯಾಗಿದ್ದು, ಆತ ಹೊಲಕ್ಕೆ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿದ್ದರು ಅನ್ನೋದು ಮೇಲ್ನೋಟಕ್ಕೆ ಸಾಬೀತಾಗಿದೆ. ಕಳೆದ ಐದಾರು ತಿಂಗಳ ಹಿಂದಷ್ಟೆ ಇದೇ ಭಾಗದಲ್ಲಿ ವಿದ್ಯುತ್ ತಂತಿ ತಗುಲಿ ಆನೆಯೊಂದು ಸಾವನ್ನಪ್ಪಿತ್ತು. ಈವರೆಗೆ ಈ ಭಾಗದಲ್ಲಿ ಸುಮಾರು ನಾಲ್ಕು ಕಾಡಾನೆಗಳು ಸಾವನ್ನಪ್ಪಿವೆ. ಕಡೂರು ಅರಣ್ಯ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದ್ದು. ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರೋ ಆರೋಪಿ ಹುಲಿಯಪ್ಪನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ…

ಸಚಿನ್ ಶೆಟ್ಟಿ ಚಿಕ್ಕಮಗಳೂರು

Exit mobile version