Site icon PowerTV

ಸಂಪುಟ ವಿಸ್ತರಣೆಯೋ ? ಪುನಾ​ರಚನೆಯೋ ?

ಬೆಂಗಳೂರು :  ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ  ಅಧಿಕಾರದ ಚುಕ್ಕಾಣಿ ಹಿಡಿದು ವರ್ಷ ಕಳೆದಿದೆ. ಆದ್ರೆ, ಇನ್ನೂ ಕೂಡ  ಪೂರ್ಣ ಸಂಪುಟ ರಚನೆಯಾಗಿಲ್ಲ.  ಒಟ್ಟು 34 ಸಚಿವ ಸ್ಥಾನಗಳಲ್ಲಿ 6 ಕ್ಯಾಬಿನೆಟ್ ದರ್ಜೆಯ ಸ್ಥಾನಗಳು ಖಾಲಿ ಇವೆ. ಈ ಆರೇ ಆರು ಸ್ಥಾನಕ್ಕೆ ಹೆಚ್ಚು ಕಮ್ಮಿ 15 -20 ಮಂದಿ ಪೈಪೋಟಿಯಲ್ಲಿದ್ದಾರೆ.

ಸದ್ಯ ರಾಜ್ಯ ರಾಜಕೀಯದಲ್ಲಿ ಸಂಪುಟ ವಿಸ್ತರಣೆ , ಪುನಾರಚನೆಯದ್ದೇ ಮಾತು. ಸಂಪುಟ ವಿಸ್ತರಣೆಯೋ, ಪುನಾ​ರಚನೆಯೋ ಅನ್ನೋ  ಗೊಂದಲವಿದೆ. ಆಗಸ್ಟ್​​​ 2ನೇ ವಾರದಲ್ಲಿ ಕ್ಯಾಬಿನೆಟ್​ಗೆ ಮೇಜರ್ ಸರ್ಜರಿ ನಡೆಯೋದು ಬಹುತೇಕ ಪಕ್ಕಾ ಆಗಿದೆ.  ಸಂಪುಟ ವಿಸ್ತರಣೆ ಅಂತಾದರೆ  6 ಸ್ಥಾನಗಳನ್ನು ಭರ್ತಿ ಮಾಡಲಾಗುತ್ತೆ. ಆ ಆರು ಸ್ಥಾನಗಳಲ್ಲಿ ವಲಸೆ ಬಂದ ಎಂಟಿಬಿ ನಾಗರಾಜ್, ಎಚ್​. ವಿಶ್ವನಾಥ್ ಮತ್ತು ಆರ್​. ಶಂಕರ್​ ಗೆ ಸ್ಥಾನ ನೀಡಲೇ ಬೇಕಾದ ಪರಿಸ್ಥಿತಿ ಸಿಎಂ ಬಿಎಸ್​ವೈ ಎದುರಿಗಿದೆ! ಇನ್ನು ಉಳಿಯೋದು ಮೂರೇ ಮೂರು ಸ್ಥಾನ.. ಆ ಮೂರು ಸ್ಥಾನದಲ್ಲಿ  ಮುನಿರತ್ನ ಮತ್ತು ಪ್ರತಾಪ್​ ಗೌಡ ಪಾಟೀಲ್​​ಗೆ ಎರಡು ಸ್ಥಾನಗಳನ್ನು ಉಳಿಸಿಕೊಳ್ಳ ಬೇಕಿದೆ. ಈ ಲೆಕ್ಕಾಚಾರದಲ್ಲಿ ಉಳಿಯುವುದು ಒಂದೇ ಒಂದು ಸ್ಥಾನ ಮಾತ್ರ.

ಈ  ಒಂದು ಸ್ಥಾನಕ್ಕೆ ಉಮೇಶ್ ಕತ್ತಿ, ಬಸವನಗೌಡ ಪಾಟೀಲ್ ಯತ್ನಾಳ್, ರಾಜೂಗೌಡ , ಸಿ.ಪಿ ಯೋಗೀಶ್ವರ್, ಅರವಿಂದ ಲಿಂಬಾವಳಿ, ರಾಮದಾಸ್​ ಸೇರಿದಂತೆ ಹಲವರು ಕ್ಯೂನಲ್ಲಿದ್ದು, ಯಾರಿಗೆ ಸ್ಥಾನ ನೀಡುವುದು ಅನ್ನೋದು ಬಿ.ಎಸ್ ಯಡಿಯೂರಪ್ಪ ಅವರಿಗೆ  ದೊಡ್ಡ ತಲೆನೋವಾಗಿದೆ.

ಇನ್ನು ಪುನರ್ ರಚನೆಯಾದರೆ ಸ್ಥಾನ ಕಳೆದುಕೊಳ್ಳುವವರನ್ನು ಸಮಾಧಾನ ಪಡೆಸೋದು ಕಷ್ಟಸಾಧ್ಯ. ಇನ್ನೊಬ್ಬರಿಗೆ ಸ್ಥಾನ ಕೊಡಲು ತಾವು ರಾಜೀನಾಮೆ ನೀಡಬೇಕಾದ ಸಂದರ್ಭದಲ್ಲಿ ಸಹಜವಾಗಿ ಅಸಮಾಧಾನಗೊಳ್ಳುತ್ತಾರೆ. ಆದರೂ ಸಂಪುಟ ಪುನರ್​​​​ರಚನೆ ಅಂತಾದ್ರೆ ಸಿಸಿ ಪಾಟೀಲ್, ‌ಪ್ರಭು ಚೌಹಾಣ್​​​​​​​, ಶ್ರೀಮಂತ್​​​​​​ ಪಾಟೀಲ್, ಶಶಿಕಲಾ ಜೋಲ್ಲೆ, ಕೊಟಾ ಶ್ರೀನಿವಾಸ ಪೂಜಾರಿ,‌ ಸಚಿವ ನಾಗೇಶ್‌‌ ಸೇರಿ ಒಟ್ಟು 6 ಮಂದಿಗೆ ಕೊಕ್ ನೀಡುವ ಸಾಧ್ಯತೆ ಹೆಚ್ಚಿದೆ.

ರಾಜ್ಯಪಾಲರನ್ನು ಭೇಟಿ ಮಾಡಿದ ಸಿಎಂ :  ಇನ್ನು ಆಗಸ್ಟ್ 2ನೇ ವಾರದಲ್ಲಿ ಸಂಪುಟಕ್ಕೆ ಸರ್ಜರಿ ನಡೆಯೋದು ಬಹುತೇಕ ಪಕ್ಕಾ ಆಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ ಬಗ್ಗೆ ಚರ್ಚೆ ನಡೆಸಲಿದ್ದಾರೆ.  ಅದಕ್ಕೂ  ಮೊದಲು ಇಂದು ಬೆಳಗ್ಗೆ ಗೃಹಸಚಿವ ಬಸವರಾಜ್ ಬೊಮ್ಮಾಯಿ ಜೊತೆಗೆ   ರಾಜ್ಯಪಾಲ ವಜುಭಾಯ್ ವಾಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಸಂಪುಟ ವಿಸ್ತರಣೆಯ ಕುರಿತು ಚರ್ಚಿಸಲೆಂದೇ ಸಿಎಂ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

Exit mobile version