Site icon PowerTV

ಬ್ರಾಹ್ಮಣ ವ್ಯಕ್ತಿಯ ಶವ ಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕ…!

ಮಂಗಳೂರು : ವಾರಸುದಾರರಿದ್ದರೂ ಅನಾಥವಾಗಿ ಸಾವನ್ನಪ್ಪಿದ ಬ್ರಾಹ್ಮಣ ವ್ಯಕ್ತಿಯೊಬ್ಬರ ಅಂತಿಮ ಸಂಸ್ಕಾರವನ್ನ ಮುಸ್ಲಿಂ ಯುವಕನೋರ್ವ ನೆರೆವೇರಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಪಡುಬಿದ್ರಿ ನಿವಾಸಿ ವೇಣುಗೋಪಾಲ ರಾವ್(62) ನಿನ್ನೆ ಮೃತರಾಗಿದ್ದರು. ಸಾವಿನ ಸುದ್ದಿ ತಿಳಿದರೂ ಸಂಬಂಧಿಕರಾರು ಕೂಡ ಮುಂದೆ ಬಂದಿಲ್ಲ. ಅಲ್ಲದೆ ವೇಣುಗೋಪಾಲ್ ರಾವ್ ಅವ್ರು ಕಳೆದ ಎರಡು ವರ್ಷಗಳಿಂದ ಅನಾಥಾಶ್ರಮದಲ್ಲಿಯೇ ಇದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆಯ ನಂತರ ಅವರು ಮಾನಸಿಕ ಖಿನ್ನತೆಯಿಂದ ಹೊರಬಂದಿದ್ದರು. ಈ ಸಂದರ್ಭದಲ್ಲಿ ಮನೆಯವರನ್ನ ನೋಡುವುದಕ್ಕಾಗಿ ಪರಿತಪಿಸುತ್ತಿದ್ದರು. ಆದ್ರೆ ಮನೆಯವರು ಬಂದಿರಲಿಲ್ಲ. ರಾವ್ ಅವರ ನಿಧನದ ಸುದ್ದಿ ಕೇಳಿಯೂ ಮನೆಯವರು ಮುಂದೆ ಬಂದಿಲ್ಲ. ಹಾಗಾಗಿ ಖುದ್ದು ಆ್ಯಂಬುಲೆನ್ಸ್ ಚಾಲಕ ಹಾಗೂ ಮೊಹಮ್ಮದ್ ಆಸಿಫ್ ಅವರೇ ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಅಂತಿಮ ಸಂಸ್ಕಾರ ನೆರೆವೇರಿಸಿದ್ದಾರೆ. ಮುಲ್ಕಿ ಠಾಣಾ ಪೊಲೀಸರ ಅನುಮತಿಯನ್ನ ಪಡೆದೇ ಅಂತ್ಯ ಸಂಸ್ಕಾರವನ್ನ ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ. ಇನ್ನು ಆಸಿಫ್ ಕೆಲ ಸ್ನೇಹಿತರನ್ನ ಜೊತೆ ಸೇರಿಸಿಕೊಂಡು ಹಿಂದೂ ರುದ್ರಭೂಮಿಯಲ್ಲೇ ಶವ ಸಂಸ್ಕಾರವನ್ನ ಮಾಡಿದ್ದಾರೆ. ಕುಟುಂಬಿಕರಿಗೆ ಮಾನವೀಯ ಗುಣಗಳಿಲ್ಲದಿದ್ದರೂ, ಮಾನವೀಯ ಗುಣಗಳನ್ನ ಹೊಂದಿರುವ ಆಸಿಫ್ ಅವರು ವೇಣುಗೋಪಾಲ್ ಅವ್ರ ಕುಟುಂಬದಲ್ಲಿ ಓರ್ವನಂತೆ ಮುಂದೆ ನಿಂತು ಅಂತ್ಯ ಸಂಸ್ಕಾರ ನೆರೆವೇರಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ವೃತ್ತಿಯಲ್ಲಿ ಆ್ಯಂಬುಲೆನ್ಸ್​ ಡ್ರೈವರ್​ ಆಗಿರುವ ಮೊಹಮ್ಮದ್ ಆಸಿಫ್ ಅವ್ರು ಮಾನಸಿಕ ಖಿನ್ನತೆಗೊಳಗಾದವರಿಗೆ ಆಶ್ರಯ ನೀಡುತ್ತಿದ್ದಾರೆ, ಜೊತೆಜೊತೆಗೆ ಮೈಮುನಾ ಫೌಂಡೇಶನ್ ನಿರ್ದೇಶಕರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಇರ್ಷಾದ್ ಕಿನ್ನಿಗೋಳಿ, ಮಂಗಳೂರು

Exit mobile version