Site icon PowerTV

ಪ್ರತಿಪಕ್ಷದ ಆರೋಪಕ್ಕೆ “ಪಂಚ” ಸಚಿವರ ಪಂಚ್​ !

ಬೆಂಗಳೂರು : ರಾಜ್ಯ ಸರ್ಕಾರ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಕೋಟಿ ಕೋಟಿ ಲೂಟಿ ಹೊಡೆದಿದೆ ಎಂಬ ಮಾಜಿ ಮುಖ್ಯಮಂತ್ರಿ , ವಿಪಕ್ಷ ನಾಯಕ ಸಿದ್ದರಾಮಯ್ಯನವರ ಆರೋಪಗಳಿಗೆ ಸರ್ಕಾರದ ಪಂಚ ಸಚಿವರು ಸುದ್ದಿಗೋಷ್ಠಿ ನಡೆಸಿ ಪ್ರತ್ಯುತ್ತರ ನೀಡಿದ್ದಾರೆ.  ಪ್ರತಿಪಕ್ಷಗಳ ಆರೋಪಕ್ಕೆ ಸುದ್ದಿಗೋಷ್ಠಿ ನಡೆಸಿ ಉತ್ತರಿಸಿರುವ ಕಂದಾಯ ಸಚಿವ ಆರ್​. ಅಶೋಕ್​, ವೈದ್ಯಕೀಯ ಶಿಕ್ಷಣ  ಸಚಿವ ಡಾ.ಕೆ ಸುಧಾಕರ್​​, ಉಪಮುಖ್ಯಮಂತ್ರಿ ಅಶ್ವತ್ಥ್​ ನಾರಾಯಣ್​, ಕಾರ್ಮಿಕ ಸಚಿವ  ಶಿವರಾಂ ಹೆಬ್ಬಾರ್​​, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೋವಿಡ್​ ಸಂದರ್ಭದಲ್ಲಿ ಯಾವುದೇ ಅವ್ಯವಹಾರ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಕಂದಾಯ ಸಚಿವ ಆರ್​ ಅಶೋಕ್​ ಮಾತನಾಡಿ,  ನಾವು ಏನು ಸಲಕರಣೆ ಕೊಂಡುಕೊಂಡಿದ್ದೇವೆ ಅದು ಪಾರದರ್ಶಕವಾಗಿದೆ, ವೆಂಟಿಲೇಟರ್​​ ಖರೀದಿಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವಾಗಿಲ್ಲ, ಬಿಡುಗಡೆಗೊಳಿಸಿರುವ  ಪ್ರತಿ ಪೈಸೆಯ ಲೆಕ್ಕ ಸರ್ಕಾರದ ಬಳಿ ಇದೆ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಅಶ್ವಥ್​ ನಾರಾಯಣ್​ ಮಾತನಾಡಿ,  ಕಾಂಗ್ರೆಸ್​​ ಪ್ರತಿಬಾರಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಆರೋಗ್ಯ ಇಲಾಖೆಯಲ್ಲಿ ಈವರೆಗೆ 290 ಕೋಟಿ ರೂ. ಮಾತ್ರ ಖರ್ಚಾಗಿರುವುದು, ಕಾಂಗ್ರೆಸ್​ ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಿದೆ, ಅತೀ ಕಡಿಮೆ ಬೆಲೆಯಲ್ಲಿ ಮಾಸ್ಕ್​ ಖರೀದಿ ಮಾಡಿದ್ದೇವೆ ಎಂದರು.
 ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾತನಾಡಿ,  ಎಲ್ಲಾ ಸಚಿವರು ಈವರೆಗೆ ಒಂದೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದಾರೆ, ಸರ್ಕಾರದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ನಾವು ಭ್ರಷ್ಟಾಚಾರ ಮಾಡಿದ್ದರೆ ನಮ್ಮನ್ನು ನೇಣಿಗೆ ಹಾಕಿ ಎಂದು ಹೇಳಿದರು.

 ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್​ ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ಅವ್ಯವಹಾರ ಮಾಡಿದೆ, ಕಾಂಗ್ರೆಸ್​ ಮಾಡಿರುವ ಅವ್ಯವಹಾರವನ್ನೇ ನಾವಿನ್ನು ಮರೆತಿಲ್ಲ ಎಂದರು.

ಬಳಿಕ ಮಾತನಾಡಿದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್​​ , ಕಾರ್ಮಿಕ ಇಲಾಖೆಯಿಂದ ಒಟ್ಟು 894 ಕೋಟಿ ಖರ್ಚು ಮಾಡಿದ್ದೇವೆ, ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಒಟ್ಟಿನಲ್ಲಿ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮೇಲೆ ಮಾಡಿರುವ ಪ್ರತಿಯೊಂದು ಆರೋಪಳಿಗೆ ಪಂಚ ಸಚಿವರು ಜಂಟೀ ಸುದ್ದಿಗೋಷ್ಟಿ ನಡೆಸುವ ಮೂಲಕ ಪಂಚ್​ ನೀಡಿದ್ರು

Exit mobile version