Site icon PowerTV

ಕೊರೋನಾ ಸೋಂಕಿತ ಹಿಂದೂ ಯುವಕನ ಅಂತ್ಯ ಸಂಸ್ಕಾರಕ್ಕೆ ಹೆಗಲು ಕೊಟ್ಟ PFI ಕಾರ್ಯಕರ್ತರು

ಮಂಡ್ಯ: ಕೊರೋನಾ ಸೋಂಕಿತರು ಮೃತಪಟ್ಟರೆ ಕುಟುಂಬದರು, ಸಂಬಂಧಿಕರು ಕೂಡ ಹತ್ತಿರ ಹೋಗೋಕೆ ಹೆದರುತ್ತಾರೆ.  ಕೊರೋನಾ ಸೋಂಕು ತಮಗೆ ಎಲ್ಲಿ ಹರಡುವುದೋ ಅನ್ನೋ ಭಯದಲ್ಲಿ ಮೃತರ ಅಂತಿಮ ದರ್ಶನ ಪಡೆಯೋಕೂ ಹಿಂಜರಿಯುತ್ತಾರೆ. ಎಷ್ಟೋ ಕಡೆ ಕೊರೋನಾ ಸೋಂಕಿತರ ಅಂತ್ಯಕ್ರಿಯೆ ಅನಾಥವಾಗಿ ಹಾಗೂ ಅಮಾನವೀಯವಾಗಿ ನಡೆದಿರೋ ದೃಶ್ಯಗಳನ್ನ ನೋಡಿದ್ದೇವೆ.
ಆದರೆ, ಸಕ್ಕರೆ ನಾಡು ಮಂಡ್ಯದಲ್ಲಿ PFI ಕಾರ್ಯಕರ್ತರ ಪಡೆಯೊಂದು ಸ್ವಯಂಪ್ರೇರಿತರಾಗಿ ಕೊವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಖುದ್ದು ಮುಂದೆ ಬಂದಿದೆ. ಒಂದು ವಾರದ ಲಾಕ್ ಡೌನ್ ಘೋಷಣೆ ಬಳಿಕ ಇತ್ತೀಚೆಗೆ ಬೆಂಗಳೂರಿನಿಂದ ವ್ಯಕ್ತಿಯೊಬ್ಬರು ಕೆ.ಆರ್.ಪೇಟೆಗೆ ಆಗಮಿಸಿದ್ದರು.  ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಆ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದ್ರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಗೆ ಕೊರೋನಾ ಲಕ್ಷಣ ಇದ್ದ ಕಾರಣ ಅವರ ಗಂಟಲು ಮಾದರಿಯನ್ನ ಕೊವಿಡ್ ಟೆಸ್ಟ್ ಗೆ ಕಳಿಸಲಾಗಿದೆ. ಕೊವಿಡ್ ನಿಯಮಾವಳಿಗಳ ಪ್ರಕಾರವೇ ಮೃತರ ಅಂತ್ಯಕ್ರಿಯೆ ಮಾಡಬೇಕಿರುವ ಕಾರಣ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಚಿಂತನೆಯಲ್ಲಿತ್ತು. ಈ ವೇಳೆ ಕೆ.ಆರ್.ಪೇಟೆ ತಾಲೂಕು PFI ಸಂಘಟನೆ ಕಾರ್ಯಕರ್ತರು ಸ್ವತಃ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದಾರೆ.  ಸ್ವಯಂ ಪ್ರೇರಿತರಾಗಿ ಬಂದಿರುವ PFI ಕಾರ್ಯಕರ್ತರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಅಂತ್ಯಕ್ರಿಯೆಯ ನಿಯಮಾವಳಿಗಳ ಬಗ್ಗೆ ತರಬೇತಿ ನೀಡಿದ್ರು.
ಬಳಿಕ ಮೃತ ವ್ಯಕ್ತಿಯ ಶವಕ್ಕೆ ಹೆಗಲುಕೊಟ್ಟು, ಹಿಂದೂ ಧರ್ಮದ ಸಂಪ್ರದಾಯದಂತೆ, ಕೊವಿಡ್ ನಿಯಮಾವಳಿಗಳ ಪ್ರಕಾರ ಅಂತ್ಯ ಸಂಸ್ಕಾರ ನಡೆಸಿದ್ರು.  ಕೆ.ಆರ್. ಪೇಟೆ PFI ಕಾರ್ಯಕರ್ತರ ಮಾನವೀಯ ಕಾರ್ಯಕ್ಕೆ ತಾಲೂಕಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
….
ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.

Exit mobile version