ದಕ್ಷಿಣ ಕನ್ನಡ : ನಾಳೆ ‘ಸಂಡೇ ಲಾಕ್ ಡೌನ್’ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯೂ ಸಂಪೂರ್ಣ ಲಾಕ್ ಆಗಲಿದೆ. ಇದುವರೆಗೂ ಇದ್ದ ಅಗತ್ಯ ಸಾಮಗ್ರಿ ಖರೀದಿಯ ಸಮಯಾವಕಾಶವೂ ನಾಳೆಗೆ ಅನ್ವಯಿಸದು. ಆದ್ದರಿಂದ ಜಿಲ್ಲೆಯಲ್ಲಿ ನಾಳೆ ಯಾವುದೇ ದಿನಸಿ ಅಂಗಡಿಗಳು ತೆರೆಯುವಂತಿಲ್ಲ. ಜೊತೆಗೆ ಹೂವು, ಹಣ್ಣು-ತರಕಾರಿ, ಮೀನು-ಮಾಂಸಗಳೂ ಲಭ್ಯವಿರುವುದಿಲ್ಲ. ಆದರೆ ‘ನಂದಿನಿ’ ಹಾಲು ಹಾಗೂ ಹಾಲಿನ ಉತ್ಪನ್ನಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ (DKMU) ಸ್ಪಷ್ಟಪಡಿಸಿದೆ.
ನಾಳೆ ‘ಸಂಡೇ ಲಾಕ್ ಡೌನ್’ ಹಿನ್ನೆಲೆ ಯಾವುದೇ ಬಗೆಯ ಅಗತ್ಯ ಸಾಮಗ್ರಿ ಖರೀದಿಗೂ ವಿನಾಯಿತಿ ಇಲ್ಲ ಅನ್ನೋದಾಗಿ ಜಿಲ್ಲಾಡಳಿತದ ಘೋಷಣೆಯಿಂದ ಉಂಟಾದ ಗೊಂದಲದ ಹಿನ್ನೆಲೆ ಹಾಲು ಉತ್ಪಾದಕರ ಒಕ್ಕೂಟ ಸ್ಪಷ್ಟಪಡಿಸಿದೆ. ಹಾಲು ಹಾಗೂ ಹಾಲಿನ ಉತ್ಪನ್ನ ಸರಬರಾಜಿಗೆ ಅನುಮತಿಯಿದ್ದು, ಸದ್ಯ ಲಾಕ್ ಡೌನ್ ನಲ್ಲಿ ಇರುವ ಸಮಯ ಮಿತಿ ಅವಕಾಶದಂತೆ ನಾಳೆ (ಭಾನುವಾರ) ಬೆಳಿಗ್ಗೆಯೂ 8 ರಿಂದ 11 ಗಂಟೆಯವರೆಗೆ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ಡೀಲರ್ ಕೇಂದ್ರಗಳಲ್ಲಿ ಅಗತ್ಯವಿರುವಷ್ಟು ಪ್ರಮಾಣದಲ್ಲಿ ದೊರೆಯಲಿದೆ ಎಂದು DKMU ಸ್ಪಷ್ಟಪಡಿಸಿದೆ.
ಇನ್ನು ಭಾನುವಾರ ಮೆಡಿಕಲ್ ಹಾಗೂ ಇನ್ನಿತರ ತುರ್ತು ಸೇವೆಗಳಿಗೂ ವಿನಾಯಿತಿ ಇದ್ದು, ಉಳಿದಂತೆ ಕಟ್ಟುನಿಟ್ಟಿನ ಲಾಕ್ ಡೌನ್ ನಿಯಮಗಳು ಜಾರಿಯಲ್ಲಿರುತ್ತವೆ. ಜುಲೈ 23 ರ ಬೆಳಿಗ್ಗೆ 5 ಗಂಟೆವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ ಭಾನುವಾರ ಹೊರತುಪಡಿಸಿ, ಸೋಮವಾರದಿಂದ ಮತ್ತೆ ಬೆಳಿಗ್ಗೆ 8 ರಿಂದ 11 ರ ವರೆಗೆ ಅಗತ್ಯ ವಸ್ತುಗಳ ಖರೀದಿಗೂ ವಿನಾಯಿತಿ ಇರಲಿದೆ.
