Site icon PowerTV

ಹಿಂದೂ ವ್ಯಕ್ತಿಯ ಶವಸಂಸ್ಕಾರಕ್ಕೆ ಹೆಗಲು ನೀಡಿ ಮಾದರಿಯಾದ ‘ಆಪತ್ಬಾಂಧವ’..!

ಮಂಗಳೂರು : ಕೋಮುಸೂಕ್ಷ್ಮವೆನೆಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಮುದಾಯದ ವ್ಯಕ್ತಿಯೊಬ್ಬನ ಅಂತ್ಯ ಸಂಸ್ಕಾರಕ್ಕೆ ಮುಸ್ಲಿಂ ಧರ್ಮೀಯನೊಬ್ಬನ ಹೆಗಲು ಕೊಟ್ಟ ಅಪರೂಪದ ಘಟನೆ ನಡೆದಿದ್ದು, ಇದೀಗ ಜಾಲತಾಣದಾದ್ಯಂತ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಮಂಗಳೂರಿನ ಮುಲ್ಕಿಯ ಆ್ಯಂಬುಲೆನ್ಸ್ ಚಾಲಕ ಮೊಹಮ್ಮದ್ ಆಸಿಫ್ ಎಂಬವರೇ ಈ ರೀತಿಯಾಗಿ ವಾರಿಸುದಾರರಿಲ್ಲದೇ ಅನಾಥವಾಗಿದ್ದ ಚಂದ್ರಹಾಸ ಕುಲಾಲ್ ಎಂಬವರ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದ್ದಾರೆ. ವಾರದ ಹಿಂದೆ ಚಂದ್ರಹಾಸ ಕುಲಾಲ್ ಸಾವನ್ನಪ್ಪಿದ್ದು, ವಾರಿಸುದಾರರಿಲ್ಲದ ಕಾರಣ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿತ್ತು. ಕೊನೆಗೂ ಪೊಲೀಸರು ಬಂಟ್ವಾಳದಲ್ಲಿರುವ ಚಂದ್ರಹಾಸ ಕುಲಾಲ್ ಅವರ ಕುಟುಂಬಿಕರನ್ನ ಸಂಪರ್ಕಿಸಿದ್ದರಾದರೂ, ಅವರ ಸಹೋದರನ ಹೊರತಾಗಿ ಯಾರೊಬ್ಬರೂ ಕೋವಿಡ್ ಭಯದಿಂದ ಮೃತದೇಹ ಸ್ವೀಕರಿಸಲು ಮುಂದಾಗಿರಲಿಲ್ಲ. ಮಾತ್ರವಲ್ಲದೇ ಚಂದ್ರಹಾಸ್ 15 ವರುಷದ ಹಿಂದೆಯೇ ಮನೆ ಬಿಟ್ಟಿದ್ದು, ಮಾನಸಿಕ ರೋಗದಿಂದಾಗಿ ಬೀದಿ ಬೀದಿ ಸುತ್ತುತ್ತಿದ್ದರು ಎನ್ನಲಾಗಿದೆ. ಕೊನೆಗೆ, ಪಾರ್ಥಿವ ಶರೀರ ಪಡೆಯಲು ಬಂದ ಚಂದ್ರಹಾಸ ಅವರ ತಮ್ಮನಿಗೆ ಯಾವೊಂದು ಅವಕಾಶಗಳು‌ ಇಲ್ಲದೇ ಹೋದಾಗ‌ ‘ಆಪತ್ಬಾಂಧವ’‌ ಹೆಸರಿನ‌ ಆ್ಯಂಬುಲೆನ್ಸ್ ಹೊಂದಿರೊ ಮೊಹಮ್ಮದ್ ಆಸಿಫ್ ಅವರನ್ನ ಸಂಪರ್ಕಿಸಿದ್ದು, ತಕ್ಷಣ ನೆರವಿಗೆ ಬಂದವರೇ ಮುಲ್ಕಿಯ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಹಿಂದೂ ಧಾರ್ಮಿಕ ವಿಧಿ‌ವಿಧಾನ ಪ್ರಕಾರ ಅಂತ್ಯ ಸಂಸ್ಕಾರ ನಡೆಸಲು ವ್ಯವಸ್ಥೆ ಕಲ್ಪಿಸಿ ಮಾದರಿಯಾದರು.

Exit mobile version