Site icon PowerTV

ಕೊರೊನಾ ಉಪಟಳ – ಜಿಲ್ಲೆಯಲ್ಲಿ 400 ಬೆಡ್ ರೆಡಿ..!

ಶಿವಮೊಗ್ಗ : ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮೆಗ್ಗಾನ್‍ ಆಸ್ಪತ್ರೆಯಲ್ಲಿ ಪ್ರಸ್ತುತ 150 ಹಾಸಿಗೆ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಗಾಜನೂರಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 190 ಬೆಡ್ ಹಾಗೂ ಭದ್ರಾವತಿ ವಿಎಸ್‍ಐಎಲ್‍ನಲ್ಲಿ 50 ಬೆಡ್ ಸೌಲಭ್ಯ ಸಜ್ಜುಗೊಳಿಸಲಾಗುತ್ತಿದೆ. 23 ಕೋವಿಡ್ ಕೇರ್ ಸೆಂಟರ್‍ಗಳನ್ನು ಗುರುತಿಸಲಾಗಿದೆ ಜೊತೆಗೆ ರೋಗ ಲಕ್ಷಣಗಳಿಲ್ಲದ ಕರೋನಾ ಪಾಸಿಟಿವ್ ವ್ಯಕ್ತಿಗಳಿಗಾಗಿ ಎರಡು ತಾಲೂಕುಗಳಲ್ಲಿ ಮೆಗ್ಗಾನ್ ಆಸ್ಪತ್ರೆಯ ಸ್ಯಾಟಲೈಟ್ ಕ್ಯಾಂಪಸ್ ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಜಿಲ್ಲೆಯಲ್ಲಿ ಒಟ್ಟು 199 ಕರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 870 ಸ್ಯಾಂಪಲ್‍ಗಳ ವರದಿ ಬರಬೇಕಾಗಿದೆ. ಜಿಲ್ಲೆಯಲ್ಲಿರುವ ಎರಡು ಪ್ರಯೋಗಾಲಯಗಳಲ್ಲಿ 24 ರಿಂದ 32 ಗಂಟೆಯ ಒಳಗಾಗಿ ವರದಿ ಬರುತ್ತಿದೆ. ಪ್ರತಿ ದಿನ ಸರಾಸರಿ 450 ಸ್ಯಾಂಪಲ್ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನು ಜಿಲ್ಲೆಯಲ್ಲಿ 40 ಕಂಟೈನ್ ಮೆಂಟ್ ಜ್ಹೋನ್ ಗಳನ್ನು ಜಾರಿಗೊಳಿಸಲಾಗಿದೆ ಎಂದರು. ಅಲ್ಲದೇ ಕ್ವಾರೆಂಟೈನ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಎಫ್‍ಐಆರ್ ದಾಖಲಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಭಾನುವಾರ ಆವಶ್ಯಕ ಸೇವೆಗಳನ್ನು ಹೊರತುಪಡಿಸಿ ಸಂಪೂರ್ಣ ಲಾಕ್‍ಡೌನ್ ಇರಲಿದೆ. ಪ್ರತಿದಿನ ರಾತ್ರಿ 8‌ಗಂಟೆಯಿಂದ ಕಫ್ರ್ಯೂ ಕಟ್ಟುನಿಟ್ಟಿನಿಂದ ಜಾರಿಗೊಳಿಸಲಾಗುವುದು, ಸಾರ್ವಜನಿಕರು ತಮ್ಮ ಎಚ್ಚರಿಕೆಯಲ್ಲಿ ಇರಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Exit mobile version