Site icon PowerTV

ಐಟಿ ಆಫೀಸರ್ಸ್ ಗಳೆಂದು ಟೋಪಿ ಹಾಕಿದ್ದ. ಮೂವರಿಗೆ ಕೋಳ ತೊಡಿಸಿದ ಪೊಲೀಸರು.

ಶಿವಮೊಗ್ಗ : ಕಳೆದೆರೆಡು ದಿನಗಳ ಹಿಂದೆಯಷ್ಟೇ ಶಿವಮೊಗ್ಗ ಜಿಲ್ಲೆಯ ಸಾಗರದ ಜನ್ನೆಹಕ್ಲು ಗ್ರಾಮದಲ್ಲಿ ಐಟಿ ಅಧಿಕಾರಿಗಳೆಂದು ನಂಬಿಸಿ, ವಿಶ್ವನಾಥ್ ಎಂಬುವವರಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಾಗರದ ಗ್ರಾಮಾಂತರ ಪೋಲೀಸರ ಮಿಂಚಿನ ಕಾರ್ಯಾಚರಣೆ ಫಲವಾಗಿ ಆರೋಪಿಗಳು, ಬಲೆಗೆ ಬಿದ್ದಿದ್ದಾರೆ. ನಿನ್ನೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲೀಸರು ಆನಂದಪುರ ಸಮೀಪ ದಾಸಕೊಪ್ಪ ವೃತ್ತದಲ್ಲಿ ಇವರನ್ನು ಬಂಧಿಸಿದ್ದಾರೆ. ಭದ್ರಾವತಿ ಮೂಲದವರಾಗಿರುವ ಆರೋಪಿಗಳಾದ ಚಂದನ್, ನವೀನ, ಲತೇಶ್ ಎಂಬುವವರನ್ನು ಬಂಧಿಸಿ ಅವರಿಂದ 1.50 ಲಕ್ಷ ರೂ.ನಗದು ಹಾಗೂ ಕೃತ್ಯಕ್ಕೆ ಬಳಸಿದ ಇಟಿಯೋಸ್ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಅಂದಹಾಗೆ, ಜೂ.12 ರಂದು, ಜನ್ನೆಹಕ್ಲುವಿನ ವಿಶ್ವನಾಥ್ ಎಂಬುವವರ ಮನೆಗೆ ನಾಲ್ವರು ಅಪರಿಚಿತರು ಬಂದು ನಾವು ಐಟಿ ಇಲಾಖೆ ಅಧಿಕಾರಿಗಳೆಂದು ಹೇಳಿಕೊಂಡು, ನಿಮ್ಮ ವ್ಯವಹಾರ ಹಾಗೂ ಬ್ಯಾಂಕಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ನೀಡುವಂತೆ ಕೇಳಿದ್ದಾರೆ. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಂಬಿಸಿ 2.30 ಲಕ್ಷ ರೂ.ವಂಚಿಸಿದ್ದರು. ಈ ಹಿನ್ನೆಲೆಯಲ್ಲಿ ದೂರು ಸ್ವೀಕರಿಸಿದ ಗ್ರಾಮಾಂತರ ಠಾಣೆ ಪೊಲೀಸರು, ಸಾಗರ ಡಿ.ವೈ.ಎಸ್.ಪಿ. ವಿನಾಯಕ್ ಅವರ ಮಾರ್ಗದರ್ಶನದಲ್ಲಿ, ಈ ಟೋಪಿ ಹಾಕುವವರಿಗೆ, ಕೋಳ ತೊಡಿಸಿದ್ದಾರೆ.

Exit mobile version